ರೈತ ನಾಯಕರು ನನ್ನ ವಿರುದ್ಧ ಸುಳ್ಳು ಮತ್ತು ದ್ವೇಷವನ್ನು ಹರಡುತ್ತಿದ್ದಾರೆ: ದೀಪ್ ಸಿಧು

Update: 2021-01-28 15:27 GMT

ಚಂಡಿಗಡ.ಜ.28: ತನ್ನ ವಿರುದ್ಧ ಸುಳ್ಳು ಮಾಹಿತಿಗಳು ಮತ್ತು ದ್ವೇಷವನ್ನು ಹರಡುತ್ತಿದ್ದಾರೆಂದು ಆರೋಪಿಸಿ ನಟ-ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರು ರೈತ ನಾಯಕರ ವಿರುದ್ಧ ತೀವ್ರ ಟೀಕಾಪ್ರಹಾರವನ್ನು ನಡೆಸಿದ್ದಾರೆ.

ಸಿಧು ತಮ್ಮ ಪ್ರತಿಭಟನೆಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ರೈತ ನಾಯಕರು ಅವರನ್ನು ‘ದ್ರೋಹಿ’ ಎಂದು ಬಣ್ಣಿಸಿದ್ದರು. ರೈತ ನಾಯಕರು ಮತ್ತು ದಿಲ್ಲಿ ಪೊಲೀಸರು ನಿರ್ಧರಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿ ಮಾರ್ಗವನ್ನು ಯುವಜನರು ಒಪ್ಪಿಕೊಂಡಿರಲಿಲ್ಲ ಎಂದು ಗಣತಂತ್ರ ದಿನದಂದು ಕೆಂಪುಕೋಟೆಯಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಿದ್ದ ಸಂದರ್ಭದಲ್ಲಿ ಉಪಸ್ಥಿತರಿದ್ದು,ಹಲವರ ಆಕ್ರೋಶಕ್ಕೆ ಸಿಲುಕಿರುವ ಸಿಧು ಹೇಳಿದ್ದಾರೆ.

ದಿಲ್ಲಿಯ ಗಡಿಗಳಿಂದ ರೈತರು ತಾವಾಗಿಯೇ ಕೆಂಪುಕೋಟೆಗೆ ತೆರಳಿದ್ದರು ಮತ್ತು ಹೆಚ್ಚಿನವರು ರೈತ ನಾಯಕರು ನಿರ್ಧರಿಸಿದ್ದ ಮಾರ್ಗವನ್ನು ಒಪ್ಪಿಕೊಂಡಿರಲಿಲ್ಲ ಎಂದು ಸಿಧು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಪ್‌ಲೋಡ್ ಮಾಡಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ.

ತಾನು ಬಿಜೆಪಿ ಮತ್ತು ಆರೆಸ್ಸೆಸ್ ವ್ಯಕ್ತಿಯೆಂದು ಆರೋಪಿಸಿರುವುದಕ್ಕಾಗಿ ರೈತ ನಾಯಕರನ್ನು ತರಾಟೆಗೆತ್ತಿಕೊಂಡಿರುವ ಸಿಧು, ಆರೆಸ್ಸೆಸ್ ಅಥವಾ ಬಿಜೆಪಿಗೆ ಸೇರಿದ ವ್ಯಕ್ತಿಗಳು ಕೆಂಪುಕೋಟೆಯ ಮೇಲೆ ಸಿಖ್ ಧಾರ್ಮಿಕ ಧ್ವಜ ‘ನಿಶಾನ್ ಸಾಹಿಬ್’ ಮತ್ತು ರೈತರ ಧ್ವಜವನ್ನು ಹಾರಿಸುತ್ತಾರೆಯೇ? ಈ ಬಗ್ಗೆ ಕನಿಷ್ಠ ವಿಚಾರವನ್ನಾದರೂ ಮಾಡಿ ಎಂದಿದ್ದಾರೆ.

ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಕೆಂಪುಕೋಟೆಯಲ್ಲಿ ಇವೆರಡು ಧ್ವಜಗಳ ಆರೋಹಣದ ಸಂದರ್ಭದಲ್ಲಿ ಸಿಧು ಅಲ್ಲಿ ಉಪಸ್ಥಿತರಿದ್ದರು.

ಕೆಂಪುಕೋಟೆಯತ್ತ ಸಾಗುವಂತೆ ತಾನು ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದೆ ಎಂಬ ಹಲವಾರು ರೈತನಾಯಕರ ಆರೋಪವನ್ನು ತಳ್ಳಿಹಾಕಿದ ಸಿಧು,ತನ್ನ ವಿರುದ್ಧ ಸುಳ್ಳುಗಳನ್ನು ಮತ್ತು ದ್ವೇಷವನ್ನು ಹರಡಲಾಗುತ್ತಿದೆ. ಕೆಂಪುಕೋಟೆಯ ಗೇಟ್‌ನ್ನು ಮುರಿದ ನಂತರ ತಾನು ಅಲ್ಲಿಗೆ ತಲುಪಿದ್ದೆ. ಸಾವಿರಾರು ಜನರು ಅಲ್ಲಿ ಸೇರಿದ್ದರು.ಆದರೆ ಯಾವುದೇ ರೈತ ನಾಯಕರು ಅಲ್ಲಿರಲಿಲ್ಲ. ಯಾರೂ ಹಿಂಸಾಚಾರ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವುದರಲ್ಲಿ ತೊಡಗಿರಲಿಲ್ಲ. ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಅವರು ಧ್ವಜಸ್ತಂಭಕ್ಕೆ ನಿಶಾನ ಸಾಹಿಬ್ ಮತ್ತು ರೈತಧ್ವಜಗಳನ್ನು ಕಟ್ಟಿದ್ದರು. ಹಲವರು ಇವೆರಡೂ ಧ್ವಜಗಳ ಜೊತೆಗೆ ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದರು. ಹಾಗೆ ಮಾಡುವ ಮೂಲಕ ತಾನು ದ್ರೋಹಿಯಾಗಿದ್ದರೆ ಅಲ್ಲಿದ್ದ ಎಲ್ಲರೂ ದ್ರೋಹಿಗಳಾಗಿದ್ದಾರೆ ಎಂದಿದ್ದಾರೆ. ‘ಇದಕ್ಕೆಲ್ಲ ನಾನೇ ಕಾರಣನೆಂದು ಆರೋಪಿಸಿ ನನಗೆ ದ್ರೋಹಿ ಪಟ್ಟವನ್ನು ಕಟ್ಟಿರುವುದಕ್ಕೆ ನಿಮಗೆ (ರೈತ ನಾಯಕರು) ನಾಚಿಕೆಯಾಗಬೇಕು’ ಎಂದಿರುವ ಅವರು,ರೈತ ನಾಯಕತ್ವ ಮತ್ತು ಪ್ರತಿಯೊಬ್ಬ ವ್ಯಕ್ತಿ ದೃಢವಾದ ನಿಲುವು ತಳೆದು ‘ನಮ್ಮ ರೈತರು ಏನು ಮಾಡಿದ್ದಾರೆ ಎನ್ನುವುದನ್ನು ನೋಡಿ. ಈ ರೈತರ ಹಕ್ಕುಗಳನ್ನು ನೀಡದಿದ್ದರೆ ಅವರು ಏನನ್ನು ಬೇಕಾದರೂ ಮಾಡಬಲ್ಲರು’ಎಂದು ಹೇಳಿದ್ದರೆ ಸರಕಾರದ ಮೇಲೆ ಭಾರೀ ಒತ್ತಡವುಂಟಾಗುತ್ತಿತ್ತು ಎಂದಿದ್ದಾರೆ. ‘ಆದರೆ ನನ್ನವರೇ ನನಗೆ ದ್ರೋಹಿ ಪಟ್ಟ ಕಟ್ಟಿದ್ದಾರೆ ’ಎಂದು ಕಿಡಿಕಾರಿದ್ದಾರೆ.

ಕೆಂಪುಕೋಟೆಯತ್ತ ತೆರಳುವಂತೆ ತಾನು ಜನರನ್ನು ಪ್ರಚೋದಿಸಿದ್ದೆ ಎಂಬ ರೈತನಾಯಕರ ಆರೋಪವನ್ನು ತಳ್ಳಿಹಾಕಿರುವ ಸಿಧು,ಒಬ್ಬನೇ ವ್ಯಕ್ತಿಯ ಕರೆಯ ಮೇರೆಗೆ ಲಕ್ಷಾಂತರ ಜನರು ಬರುವುದಿಲ್ಲ ಎಂದಿದ್ದಾರೆ.

ತಾನು ರೈತರ ಪ್ರತಿಭಟನೆಗೆ ಯಾವುದೇ ಅಗೌರವವನ್ನು ತಂದಿಲ್ಲ ಎಂದಿರುವ ಸಿಧು,ರೈತ ನಾಯಕರು ಅಹಂಕಾರಿಗಳಾಗಿದ್ದಾರೆ ಮತ್ತು ತಮ್ಮ ನಿರ್ಧಾರಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಬಯಸಿದ್ದಾರೆ. ಅವರ ಗುಟ್ಟುಗಳನ್ನು ತಾನು ಬಹಿರಂಗಗೊಳಿಸಿದರೆ ಅವರಿಗೆ ಪಾರಾಗುವುದಕ್ಕೂ ಮಾರ್ಗವಿರುವುದಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News