×
Ad

ಆಯುಷ್ಮಾನ್ ಭಾರತ್: ಮಣಿಪಾಲ ಕೆಎಂಸಿಗೆ ಸರಕಾರದ ಮೆಚ್ಚುಗೆ ಪತ್ರ

Update: 2021-01-29 17:22 IST

ಉಡುಪಿ, ಜ.29: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಯಡಿ ಗಣನೀಯ ಸೇವೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಇತ್ತೀಚೆಗೆ ಕರ್ನಾಟಕ ಸರಕಾರ ಮತ್ತು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯಿಂದ ಮೆಚ್ಚುಗೆಯ ಪ್ರಮಾಣಪತ್ರ ಲಭಿಸಿದೆ.

ಇತ್ತೀಚೆಗೆ ಉಡುಪಿಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ದೇಶದ 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪ್ರಮಾಣಪತ್ರವನ್ನು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರಿಗೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡಿನ ಸಾರಿಗೆ ಸಚಿವ ಅಂಗಾರ ಎಸ್. ಅವರು ಹಸ್ತಾಂತರಿಸಿದರು. ಕೆಎಂಸಿ ಆಸ್ಪತ್ರೆಯನ್ನು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯೆಂದು 2019ರಲ್ಲಿ ಗೌರವಿಸಿತ್ತು.

2018ರಲ್ಲಿ ಆಯುಷ್ಮಾನ್ ಭಾರತ್‌ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಆಸ್ಪತ್ರೆಯಾದಾಗಿನಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಈ ಯೋಜನೆಯಡಿ ಸುಮಾರು 15,000 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು ಇದರಲ್ಲಿ 13,000ದಷ್ಟು ಜನರು ಬಿಪಿಎಲ್ ರೋಗಿಗಳಾಗಿದ್ದರು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಆಸ್ಪತ್ರೆಯು ಆಯುಷ್ಮಾನ್ ಅಡಿಯಲ್ಲಿ 1043 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಇದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆ 400ಕ್ಕೂ ಹೆಚ್ಚು ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದ ರೋಗಿಗಳ ಕೆಲವು ಪ್ರಮುಖ ವಿಭಾಗವಾರು ಸಂಖ್ಯೆ ಈ ಕೆಳಗಿನಂತಿದೆ. ಸುಮಾರು 3,000ರಷ್ಟು ಹೃದಯ ರೋಗಿಗಳು, 555 ಹೃದಯ ಶಸ್ತ್ರಚಿಕಿತ್ಸೆಗಳು, 1,055 ನರ ಶಸ್ತ್ರ ಚಿಕಿತ್ಸೆಗಳು, 905 ಮೂಳೆ ಶಸ್ತ್ರಚಿಕಿತ್ಸೆಗಳು, 140 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳು, 415 ನವಜಾತ ರೋಗಿಗಳು, 535 ಮಕ್ಕಳ ರೋಗಿ ಗಳು, 900 ಕ್ಯಾನ್ಸರ್ ರೋಗಿಗಳು, 10 ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಳು ಸೇರಿವೆ ಎಂದು ಡಾ.ಅವಿನಾಶ್ ಶೆಟ್ಟಿ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News