ಉಡುಪಿ: ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿವಿಧ ಕಾರ್ಯಕ್ರಮ
ಉಡುಪಿ, ಜ.29: ಜಿಲ್ಲೆಯಲ್ಲಿ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಉಡುಪಿ ಜಿಲ್ಲಾ ಸಾರ್ವಜನಿ ಶಿಕ್ಷಣ ಇಲಾಖೆಯು ವಿವಿಧ ಶೈಕ್ಷಣಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ಇದನ್ನು ಜಿಲ್ಲೆಯ ಎಲ್ಲ ತಾಲೂಕಿನ ಪ್ರೌಢ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಕಳೆದ ಸಾಲಿನ ಎಸೆಸೆಲ್ಸಿ ಫಲಿತಾಂಶವನ್ನು ಜಿಲ್ಲಾವಾರು, ತಾಲೂಕುವಾರು, ಶಾಲಾವಾರು ವಿಶ್ಲೇಷಣೆ ನಡೆಸಿ, ಶಾಲಾ ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸಿ, ಪರೀಕ್ಷೆಯಲ್ಲಿ ಆಗಿರುವ ಕಲಿಕಾ ಲೋಪಗಳನ್ನು ವಿಷಯವಾರು ಗುರುತಿಸಿಕೊಳ್ಳಲಾಗುತ್ತದೆ. ಮಕ್ಕಳ ಮತ್ತು ಶಿಕ್ಷಕರ ಸಾಮರ್ಥ್ಯಗಳನ್ನು ಪರಿಗಣಿಸಿ ಶಾಲೆಯಲ್ಲಿ ವರ್ಷ ಇಡೀ ಕಾರ್ಯ್ರಮಗಳನ್ನು ನಡೆಸಲಾಗುತ್ತದೆ.
ಶಾಲೆಯ ಹಂತದಲ್ಲಿ ಮಕ್ಕಳ ಕಲಿಕಾ ಆಧಾರದ ಮೇಲೆ ಮಕ್ಕಳನ್ನು 3 ತಂಡಗಳಲ್ಲಿ ವಿಂಗಡಿಸಲಾಗಿದೆ. ಶೇ.60ರಿಂದ ಶೇ.85ಕ್ಕಿಂತ ಮೇಲ್ಪಟ್ಟು ಉತ್ತಮ ಸಾಧನೆ ತೋರುವ ಗುಂಪು(ಹಸಿರು ಬಣ್ಣ), ಕನಿಷ್ಠ 40ರಿಂದ ಶೇ.59 ಸಾಧನೆ ತೋರುವ ಸಾಧಾರಣ ಗುಂಪು(ನೀಲಿ ಬಣ್ಣ), ಅನಿಯಮಿತವಾಗಿ ಶಾಲೆಗೆ ಬರುವ, ಉತ್ತೀರ್ಣರಾಗಲು ಕಷ್ಟ ಪಡುತ್ತಿರುವ ಹಾಗೂ ಅನುತ್ತೀರ್ಣರಾಗುವ ಹಂತದಲ್ಲಿರುವ ಕನಿಷ್ಠ ಸಾಧನೆ ಮಾಡುವ ಗುಂಪು(ಕೆಂಪು)ಗಳಲ್ಲಿ ವಿಂಗಡಣೆ ಮಾಡಿ ಪಟ್ಟಿಯನ್ನು ಶಾಲಾ ಹಂತದಲ್ಲಿ ಸಿದ್ಧಪಡಿಸಬೇಕಾಗಿದೆ.
ಎಲ್ಲ ವಿಷಯಗಳಿಗೆ ಸಂಬಂಧಿಸಿದ ವೇದಿಕೆಯನ್ನು ತಾಲೂಕು ಮಟ್ಟದಲ್ಲಿ ರಚಿಸಿ ಅಧ್ಯಕ್ಷರ ನೇಮಕ ಮಾಡಲಾಗಿದೆ. ಅದರಂತೆ ವಾರದ ಮೊದಲೇ ವಿಷಯಕ್ಕೆ ಸಂಬಂಧಿಸಿದ ಕಾಠಿನ್ಯತೆಯನ್ನು ತಾಲೂಕು ಶಿಕ್ಷಕರಿಂದ ತರಿಸಿಕೊಂಡು ಉಪನ್ಯಾಸ ಹಾಗೂ ಚರ್ಚೆಯನ್ನು ಏರ್ಪಡಿಸಲಾಗುತ್ತದೆ. ಎಸೆಸೆಲ್ಸಿ ಎಲ್ಲ ವಿಷಯಗಳಲ್ಲಿ ಘಟಕ, ಕಿರು, ಅರ್ಧ ವಾರ್ಷಿಕ, ಸರಣಿ, ಪೂರ್ವ ಸಿದ್ಧತಾ ಪರೀಕ್ಷೆ ನಡೆಸಬೇಕಾಗಿದೆ.
ತಾಲೂಕು ಹಂತದಲ್ಲಿ ವಾರದಲ್ಲಿ ಒಮ್ಮೆ ಮುಖ್ಯ ಶಿಕ್ಷಕರ ಸಭೆ ನಡೆಸಿ, ಮಕ್ಕಳ ಕಲಿಕಾ ಪ್ರಗತಿ ಅವಲೋಕನ ಮಾಡಲಾಗುತ್ತದೆ. ಪ್ರತಿ ಶುಕ್ರವಾರ ಸಂಜೆ 5ರಿಂದ 7ವರೆಗೆ ತಾಲೂಕಿಗೆ ಒಂದು ವಿಷಯದಂತೆ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಳೆದ ಸಾಲಿನ ಫಲಿತಾಂಶದಲ್ಲಿ ಶೇ70ಕ್ಕಿಂತ ಕಡಿಮೆ ಸಾಧನೆ ಮಾಡಿದ 33 ಪ್ರೌಢಶಾಲೆಯನ್ನು ಜಿಲ್ಲಾ ಮತ್ತು ತಾಲೂಕು ಹಂತದ ಮೇಲ್ವಿ ಚಾರಣೆಗೆ 24 ಅಧಿಕಾರಿಗಳಿಗೆ ದತ್ತು ನೀಡಲಾಗಿದೆ. ಈ ಅಧಿಕಾರಿಗಳು ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ.
ಕಲಿಕೆಯಲ್ಲಿ ಹಿಂದೆ ಉಳಿದಿರುವ ಶಾಲೆಯ ಮಕ್ಕಳ ಮನೆಗಳಿಗೆ ಭೇಟಿ, ಮಗುವಿನ ಕಲಿಕಾ ಪ್ರಗತಿಯನ್ನು ಪಾಲಕರಿಗೆ ಮನವರಿಕೆ ಮಾಡಬೇಕಾಗಿದೆ. ಇದು ಮಕ್ಕಳ ಕಲಿಕೆಗೆ ಪೂರಕವಾಗಲಿದೆ. ಜತೆಗೆ ತರಗತಿ ಮುಗಿದ ಬಳಿಕ ವಿದ್ಯಾರ್ಥಿಗಳ ಗುಂಪು ರಚಿಸಿ, ಜಾಣ ವಿದ್ಯಾರ್ಥಿ ನೇತೃತ್ವದಲ್ಲಿ ಗುಂಪು ಅಧ್ಯಯನಕ್ಕೆ ಅವಕಾಶ ನೀಡಲಾಗುವುದು. 15 ದಿನಗಳಿಗೊಮ್ಮೆ ವಿಷಯವಾರು ರಸಪ್ರಶ್ನೆ, ಹಳೆ ಪ್ರಶ್ನೆ ಪತ್ರಿಕೆ ಅಧ್ಯಯನ, ಪ್ರತಿ ಅಭ್ಯಾಸದ ಬಳಿಕ ಅತಿ ಹೆಚ್ಚು ಪ್ರಶ್ನೆಗಳನ್ನು ತೆಗೆಯಲು ಮಕ್ಕಳಿಗೆ ಅವಕಾಶ ನೀಡಬೇಕು. ಸಂಪನ್ಮೂಲ ತಂಡ ಶಿಕ್ಷಕರ ನಿಯೋಜನೆ ಸೇರಿದಂತೆ ಇತರೆ ಶೈಕ್ಷಣಿಕ ಚಟುವಟಿಕೆಯನ್ನು ಪ್ರೌಢ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಇಲಾಖಾ ಉಪನಿರ್ದೇಶಕ ಎನ್.ಎಚ್.ನಾಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.