×
Ad

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿದಿನ 400 ಕೆ.ಜಿ. ಬೆಲ್ಲ ತಯಾರಿ

Update: 2021-01-29 19:19 IST

ಉಡುಪಿ, ಜ.29: ಹಲವು ವರ್ಷಗಳಿಂದ ಪಾಳು ಬಿದ್ದಿರುವ ಬಹ್ಮಾವರ ಸಕ್ಕರೆ ಕಾರ್ಖಾನೆಯ ಪುನರ್ ‌ನಿರ್ಮಾಣಕ್ಕೆ ಪೂರಕವಾಗಿ ಮತ್ತು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇದೀಗ ಕಾರ್ಖಾನೆ ಆವರಣದಲ್ಲಿ ಆಲಮನೆಯನ್ನು ನಿರ್ಮಿಸಿ ಬೆಲ್ಲ ತಯಾರಿಸಲಾಗುತ್ತಿದೆ.

20 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕರಾವಳಿ ಭಾಗದ ಏಕೈಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯು ಪ್ರಾಯೋಗಿಕವಾಗಿ ಆರಂಭಿಸಿ ರುವ ಆಲೆಮನೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.

ಶುದ್ಧಬೆಲ್ಲವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಉದ್ದೇಶದೊಂದಿಗೆ ಜ.27ರಿಂದ ಅಧಿಕೃತವಾಗಿ ಆಲೆಮನೆಯನ್ನು ಇಲ್ಲಿ ಆರಂಭಿಸಲಾಗಿದೆ. ಆಲೆ ಮನೆಯಲ್ಲಿ ಪ್ರತಿದಿನ 400 ಕೆಜಿ ಬೆಲ್ಲವನ್ನು ತಯಾರಿಸಲಾಗುತ್ತಿದೆ. ಹಾವಂಜೆ, ಸೂಡ, ಕೆಂಜೂರು ಭಾಗದ ಕಬ್ಬು ಬೆಳೆಗಾರರು, ಆಡಳಿತ ಮಂಡಳಿ ನೀಡಿದ ಕಬ್ಬಿನ ಬೀಜದಿಂದ ಬೆಳೆದ ಕಬ್ಬನ್ನು ತರಿಸಿಕೊಂಡು ಬೆಲ್ಲ ಮಾಡುತ್ತಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

1985ರಲ್ಲಿ ಸಕ್ಕರೆ ಉತ್ಪಾದನಾ ಕಾರ್ಯ ಆರಂಭಿಸಿದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯು ದಿನವೊಂದಕ್ಕೆ 1250ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ವಾರಾಹಿ ನೀರಿನ ಯೋಜನೆ ಸರಿಯಾಗಿ ಅನುಷ್ಠಾನ ಗೊಳ್ಳದ ಪರಿಣಾಮ ಕಬ್ಬಿನ ಕೊರತೆಯಿಂದ 2006ರಲ್ಲಿ ಕಾರ್ಖಾನೆ ಸ್ಥಗಿತ ಗೊಂಡಿತ್ತು. 168 ಕಾರ್ಮಿಕರನ್ನು ಸೇವೆಯಿಂದ ವಿಮುಕ್ತಿಗೊಳಿಸಲಾಗಿತ್ತು.

ಬಳಿಕ 30 ವರ್ಷಗಳ ಅವಧಿಗೆ ಕಾರ್ಖಾನೆಯನ್ನು ರಾಮಿ ಶುಗರ್ಸ್‌ಗೆ ನೀಡ ಲಾಗಿತ್ತು. ಆದರೆ ಅವರು ಕರಾರಿನ ಷರತ್ತುಗಳನ್ನು ಪಾಲಿಸಲು ವಿಫಲರಾಗಿ ಅದರಿಂದ ಹಿಂದೆ ಸರಿದಿದ್ದರು. ರೈತರ ಕಬ್ಬಿನ ಬಾಕಿ, ಕಾರ್ಮಿಕರ ವೇತನ ಮತ್ತು ಬಾಕಿ ಹಾಗೂ ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಕಾರ್ಖಾನೆಗೆ ನೀಡಿದ ಠೇವಣಿಯನ್ನು ಮರುಪಾವತಿಸಲು ಸರಕಾರ 2013ರಲ್ಲಿ 12 ಕೋಟಿ ರೂ. ಸಾಲವನ್ನು ಮಂಜೂರು ಮಾಡಿ ಬಾಕಿ ಹಣ ಪಾವತಿಸಿತ್ತು.

''ಸರಕಾರ ಈ ಹಿಂದೆ ಕಾರ್ಖಾನೆಯ ನೆರವಿಗಾಗಿ 30ಕೋಟಿ ಸಾಲವನ್ನು ನೀಡಿದ್ದು, ಸಾಲದ ಬಡ್ಡಿ 35ಕೋಟಿಗಳಾಗಿ, ಒಟ್ಟು 65ಕೋಟಿ ಸಾಲ ಬಾಕಿ ಯಾಗಿದೆ. ಕಾರ್ಖಾನೆಯ ಪುನರ್‌ನಿರ್ಮಾಣಕ್ಕೆ ರಾಜ್ಯ ಸರಕಾರ ಕಾರ್ಖಾನೆಯ ಒಟ್ಟು ಸಾಲ ಬಾಕಿ 65ಕೋಟಿಗಳನ್ನು ಮನ್ನಾ ಮಾಡಬೇಕೆಂದು ಕಾರ್ಖಾನೆಯ ಆಡಳಿತ ಮಂಡಳಿ ಮುಖ್ಯಮಂತ್ರಿಗೆ ಮನವಿ ನೀಡಿದೆ. ಮುಂದಿನ ದಿನದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯಾವಾಗ ಆರಂಭವಾಗುತ್ತದೆ ಎಂಬ ನಿರೀಕ್ಷೆ ಯಲ್ಲಿ ರೈತರಿದ್ದಾರೆ''.
 -ಬೈಕಾಡಿ ಸುಪ್ರಸಾದ್ ಶೆಟ್ಟಿ, ಅಧ್ಯಕ್ಷರು,
ದ.ಕ ಸಹಕಾರಿ ಸಕ್ಕ ರೆ ಕಾರ್ಖಾನೆ ನಿಯಮಿತ ಬ್ರಹ್ಮಾವರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News