ಪ್ರತೀ ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿ: ಡಿಸಿ ಜಗದೀಶ್
ಉಡುಪಿ, ಜ.29: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನಿಷ್ಠ ಒಂದರಿಂದ ಎರಡು ಗೋಶಾಲೆಗಳನ್ನು ನಿರ್ಮಿಸಲು ಅಗತ್ಯವಿರುವ ಜಾಗವನ್ನು ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ನಿಯಮ 2020ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರೈತರು ಮತ್ತು ಸಾರ್ವಜನಿಕರು ತಮ್ಮಲ್ಲಿರುವ ಅನುತ್ಪಾದಕ ಜಾನುವಾರುಗಳು, ಅಪಘಾತಗೊಂಡ ಜಾನುವಾರು, ಮತ್ತಿತರ ಜಾನುವಾರು ಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದಾಗ, ಅವುಗಳನ್ನು ಪೋಷಿಸಲು ಅನುಕೂಲವಾಗುವಂತೆ ಪ್ರತಿಯೊಂದು ತಾಲೂಕಿ ನಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸೂಕ್ತ ಸ್ಥಳಾವಕಾಶವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಗೋಶಾಲೆಗಳನ್ನು ಆರಂಭಿಸುವ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ಮೇವು ಬೆಳೆಯಲು ಸಾಧ್ಯವಿರುವಂತಹ ಜಾಗವನ್ನು ಗುರುತಿಸು ವಂತೆ ನೀಲಾವರ ಗೋಶಾಲೆಯ ಟ್ರಸ್ಟಿ ಡಾ.ಸರ್ವೋತ್ತಮ ಉಡುಪ ಹೇಳಿದರು.
ಜಾನುವಾರುಗಳನ್ನು ಸಾಗಾಟ ಮಾಡುವಾಗ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರ ಗಳಿಂದ ಅನುಮತಿ ಪಡೆದ ಅಗತ್ಯ ದಾಖಲಾತಿ ಗಳನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರಬೇಕು. ಇಲ್ಲವಾದಲ್ಲಿ ಜಾನುವಾರು ಮಾಲಕ, ವಾಹನ ಮಾಲಕ, ಚಾಲಕ, ಸಹಾಯಕ, ಜಾನುವಾರ ಸಾಗಾಟದ ಸಹಾಯಕ ಈ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ನಿಯಮದಲ್ಲಿ ಅವಕಾಶವಿದೆ ಎಂದವರು ವಿವರಿಸಿದರು.
ಸಾಗಾಟ ಸಮಯದಲ್ಲಿ ಜಾನುವಾರುಗಳಿಗೆ ಯಾವುದೇ ಗಾಯಗಳಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳ ಬೇಕು. ಸಾಗಾಟದ ಮೊದಲು ಯಥೇಚ್ಛ ನೀರು/ಆಹಾರ/ ಹಸಿ ಹುಲ್ಲು, ವಾಹನದಲ್ಲಿ ಸರಿಯಾದ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಾನುವಾರುಗಳ ಸಾಗಾಟಕ್ಕಾಗಿಯೇ ರೂಪಿಸಿರುವ ನಿಯಮಗಳನ್ವಯ, ಸೂಕ್ತ ವಾಹನದಲ್ಲಿ ಸಾಗಾಟ ಮಾಡಬೇಕು. ಸಾಗಾಟದ ವೇಗ ಗಂಟೆಗೆ 25 ಕಿ.ಮೀ ಮೀರುವಂತಿಲ್ಲ. ವಾಹನದಲ್ಲಿ ಪ್ರತೀ ಜಾನುವಾರುಗಳಿಗೆ ಪ್ರತ್ಯೇಕ ಕಂಪಾರ್ಟ್ ಮೆಂಟ್ ರೀತಿಯ ವ್ಯವಸ್ಥೆ ಮಾಡಬೇಕು. ಖಾಸಗಿ ವಾಹನಗಳಲ್ಲಿ ಈ ರೀತಿಯ ಮಾರ್ಪಾಡು ಮಾಡಿಕೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಪರವಾನಗಿಯನ್ನು ನೀಡಬೇಕು. ವಾಹನಗಳಲ್ಲಿ ಜಾನುವಾರುಗಳ ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯವಾಗಿ ಇರಬೇಕು. ರಾತ್ರಿ 8ರಿಂದ ಬೆಳಗ್ಗೆ 6 ರವರಗೆ ಸಾಗಾಟ ನಿಷಿದ್ಧವಾಗಿದ್ದು, ಬೇಸಿಗೆ ಕಾಲದಲ್ಲಿ ಬೆಳಗ್ಗೆ 11ರಿಂದ ಅಪರಾಹ್ನ 3ರವರೆಗೆ ಸಾಗಾಟ ಮಾಡುವಂತಿಲ್ಲ ಎಂದು ಡಿಸಿ ಜಿ.ಜಗದೀಶ್ ಹೇಳಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ನಿಯಮ 2020ರಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಆಕ್ಷೇಪಣೆ/ ಸಲಹೆಗಳನ್ನು ಸ್ವೀಕರಿಸಿ, ಸರಕಾರಕ್ಕೆ ತಲುಪಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಹರೀಶ್ ತಮನಕರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಗೆ ಹೊರ ರಾಜ್ಯದಿಂದ ಕೃಷಿ/ಹೈನುಗಾರಿಕೆ ಉದ್ದೇಶಗಳಿಗೆ ಜಾನುವಾರು ಗಳನ್ನು ತರುವಾಗ ನಿಯಮಗಳಲ್ಲಿ ಸೂಕ್ತ ಅವಕಾಶ ನೀಡಬೇಕು. ಗೋಶಾಲೆ ಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮತಿ, ಗೋಶಾಲೆಗಳ ಕಡ್ಡಾಯ ನೊಂದಣಿ, ಗೋಮಾಳ ಜಾಗದ ಅತಿಕ್ರಮಣ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೇ ಜಾನುವಾರು ಸಾಗಾಟದ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ಅಧಿಕಾರ ನೀಡುವುದು, ಗೋಶಾಲೆಗಳಲ್ಲಿ ಪಾಲನಾ ದರ ಹೆಚ್ಚಳ ಮತ್ತಿತರ ಸಲಹೆಗಳನ್ನು ಸದಸ್ಯರು ನೀಡಿದರು.
ಸಭೆಯಲ್ಲಿ ಎಸ್ಪಿವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.