×
Ad

ಉಪ್ಪೂರಿನ ಜಿಟಿಟಿಸಿಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ: ರಾಜ್ಯ ಸರಕಾರ-ಟೊಯೊಟಾ ಮೋಟಾರ್ಸ್ ಕಂಪೆನಿ ಒಡಂಬಡಿಕೆ

Update: 2021-01-29 19:56 IST

ಉಡುಪಿ, ಜ.29: ಉಪ್ಪೂರು ಕೊಳಲಗಿರಿಯ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಸಂಬಂಧ ಜಪಾನಿನ ಟೊಯೊಟಾ ಮೋಟಾರ್ಸ್ ಕಂಪೆನಿಯು ರಾಜ್ಯ ಸರಕಾರದೊಂದಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಒಡಂಬಡಿಕೆ ಮಾಡಿಕೊಂಡಿದೆ.

ಒಡಂಬಡಿಕೆಗೆ ಸಹಿ ಹಾಕಿದ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮಾತನಾಡಿ, ತರಬೇತಿಯಿಂದ ವಿದ್ಯಾರ್ಥಿಗಳ ಕೌಶಲ್ಯಮಟ್ಟ ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಇನ್ನಷ್ಟು ಕೇಂದ್ರಗಳಲ್ಲಿ ಟೊಯೊಟಾ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪೆನಿ ಉಪಾಧ್ಯಕ್ಷ ಜಿ. ಶಂಕರ ಉಪಸ್ಥಿತರಿದ್ದರು.

ಈ ಒಪ್ಪಂದದನ್ವಯ ಟೊಯೊಟಾ ಕಂಪೆನಿಯು ಜಿಟಿಟಿಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಮತ್ತು ವೆಲ್ಡರ್ ಟ್ರೇಡ್‌ಗಳಲ್ಲಿ 3 ವರ್ಷಗಳ ವೃತ್ತಿಪರ ತರಬೇತಿ ನೀಡಲಿದೆ. ಫೆಬ್ರವರಿಯಿಂದ ಉಡುಪಿಯ ಜಿಟಿಟಿಸಿ ಕೇಂದ್ರದಲ್ಲಿ ಟೊಯೊಟಾ ಮಾದರಿ ಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಪ್ರಾರಂಭವಾಗಲಿದ್ದು, ಕೋರ್ಸ್‌ನ ಅಂತ್ಯದಲ್ಲಿ ಟೊಯೊಟಾ ಮತ್ತು ಜಿಟಿಟಿಸಿ ಜಂಟಿಯಾಗಿ ಪರೀಕ್ಷೆ ನಡೆಸಲಿವೆ.

ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಲು ಸಹಯೋಗ ನೀಡಲಾಗುವುದು ಎಂದು ಕೌಶಲಾಭಿವೃದ್ಧಿ ಸಂಯೋಜಕ ಮಂಜುನಾಥ ನಾಯಕ್ ತಿಳಿಸಿದ್ದಾರೆ.

ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನ: ಜಿಲ್ಲೆಯ ಉಪ್ಪೂರು ಕೊಳಲಗಿರಿಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಟೊಯೊಟಾ ಕಂಪೆನಿಯು ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಮತ್ತು ವೆಲ್ಡರ್ ಟ್ರೇಡ್‌ಗಳಲ್ಲಿ ವೃತ್ತಿಪ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.

ತರಬೇತಿಯು ಮೂರು ವರ್ಷಗಳ ಅವಧಿಯದ್ದಾಗಿದ್ದು, ಒಂದು ವರ್ಷ ಜಿಟಿಟಿಸಿ ಉಡುಪಿಯಲ್ಲಿ ಮತ್ತು ಎರಡು ವರ್ಷ ಬೆಂಗಳೂರಿನ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ. ಈ ಎರಡು ವರ್ಷಗಳ ಅವಧಿಯಲ್ಲಿ ಮಾಸಿಕ ಸ್ಟೈಪಂಡ್, ಸಾರಿಗೆ ಮತ್ತು ಕ್ಯಾಂಟೀನ್ ಸೌಲ್ಯ ನೀಡಲಾಗುತ್ತದೆ. ಅಭ್ಯರ್ಥಿಗಳು ಶೈಕ್ಷಣಿಕ ಹಾಗೂ ವಿಳಾಸ ದೃಡೀಕರಣ ದಾಖಲೆ ಗಳೊಂದಿಗೆ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೊಳಲಗಿರಿ, ಉಪ್ಪೂರು, ಉಡುಪಿ ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0820-2950101, 9880510585ನ್ನು ಸಂಪರ್ಕಿಸುವಂತೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News