×
Ad

ಅನಧಿಕೃತ, ಜನರಿಗೆ ತೊಂದರೆ ನೀಡುವ ಕೇಬಲ್‌ಗಳ ವಾರದೊಳಗೆ ತೆರವು: ಮನಪಾ ಆಯುಕ್ತರ ಭರವಸೆ

Update: 2021-01-29 20:15 IST

ಮಂಗಳೂರು, ಜ.29: ಖಾಸಗಿ ಟೆಲಿಕಾಂ ಸಂಸ್ಥೆಯವರು ನಗರದಲ್ಲಿ ಮೆಸ್ಕಾಂ ತಂತಿಗಳಲ್ಲೇ ಕೇಬಲ್‌ಗಳನ್ನು ಎಳೆಯುತ್ತಿರುವುದು, ಅಲ್ಲಲ್ಲಿ ರಸ್ತೆಗಳನ್ನು ಅಗೆದು ಹಾಕಿರುವುದರಿಂದ ಜನರಿಗೆ ಆಗುತ್ತಿರುವ ಕುರಿತಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರಿಂದ ತೀವ್ರ ಆಕ್ಷೇಪ, ಅಸಮಾಧಾನ ವ್ಯಕ್ತವಾಯಿತು.

ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯ ನವೀನ್ ಡಿಸೋಜಾ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಜಿಯೋ, ಏರ್‌ಟೆಲ್ ಸಂಸ್ಥೆ ನಗರದಲ್ಲಿ ಕೇಬಲ್‌ಗಳನ್ನು ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಖಾಸಗಿ ಟೆಲಿಕಾಂ ಸಂಸ್ಥೆಯವರು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನಗರದಲ್ಲಿ ಕೇಬಲ್ ಹಾಕುವುದಾಗಿ ಹೇಳಿ ಇದೀಗ ಐದಾರು ವರ್ಷಗಳಿಂದ ಮುಂದುವರಿಸಿದ್ದಾರೆ. ಒಂದು ಕೇಬಲ್‌ಗೆ ಅನುಮತಿ ನವೀಕರಣ ಮಾಡಿಸಿಕೊಂಡು ನಾಲ್ಕೈದು ಕೇಬಲ್ ‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಪ್ರತಿ ಸಭೆಯಲ್ಲೂ ಈ ಬಗ್ಗೆ ಮಾತನಾಡಿ ಹೋಗುತ್ತಿದ್ದೇವೆ. ಈ ಬಗ್ಗೆ ಆಡಳಿತ ಪಕ್ಷದವರು ಸೇರಿದಂತೆ ಸದಸ್ಯರು ಹಲವಾರು ಸಭೆಗಳಲ್ಲಿ ಆಕ್ಷೇಪಿಸುತ್ತಾ ಬಂದಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ವಿಪಕ್ಷ ಸದಸ್ಯ ಪ್ರವೀಣ್ ಚಂದ್ರ ಆಳ್ವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅನಧಿಕೃತ ಹಾಗೂ ಜನರಿಗೆ ತೊಂದರೆ ನೀಡುವ ಕೇಬಲ್‌ಗಳನ್ನು ಒಂದು ವಾರದಲ್ಲಿ ತೆರವುಗೊಳಿಸುವುದಾಗಿ ತಿಳಿಸಿದರು.

ಆಳೆತ್ತರದಲ್ಲಿ ಮಣ್ಣಿನ ರಾಶಿ: ತೊಂದರೆ ಆಗದಂತೆ ಕ್ರಮ ವಹಿಸುವ ಭರವಸೆ

ವೆನ್ಲಾಕ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗಾಗಿ ತೆರವುಗೊಳಿಸಲಾದ ಮಣ್ಣನ್ನು ವಸತಿ ಬಡಾವಣೆಯ ಸಮೀಪದ ಖಾಲಿ ಜಾಗದಲ್ಲಿ ಸುಮಾರು 40 ಅಡಿ ಎತ್ತರಕ್ಕೆ ಆಳೆತ್ತರದಲ್ಲಿ ರಾಶಿ ಹಾಕಿರುವುದರಿಂದ ಮಳೆ ಮೊದಲಾದ ಪ್ರಾಕೃತಿಕ ವಿಕೋಪದ ಸಂದರ್ಭ ಸುತ್ತಲಿನ ಜನರಿಗೆ ತೊಂದರೆಯಾಗಲಿದೆ. ಅದನ್ನು ತೆರವುಗೊಳಿಸಬೇಕೆಂದು ಸದಸ್ಯ ವಿನಯ್ ರಾಜ್ ಆಗ್ರಹಿಸಿದರು.

ಈ ಬಗ್ಗೆ ಚರ್ಚೆ ನಡೆದು ಸ್ಥಳೀಯರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಅಕ್ಷಯ್ ಶ್ರೀಧರ್ ಭರವಸೆ ನೀಡಿದರು.

ಸ್ಮಾರ್ಟ್‌ಸಿಟಿ ನಿರ್ದೇಶಕರ ಆಯ್ಕೆ : ಮಾತಿನ ಸಮರ !

ಸ್ಮಾರ್ಟ್‌ಸಿಟಿ ನಿರ್ದೇಶಕ ಹುದ್ದೆಗೆ ಕಾಂಗ್ರೆಸ್‌ನಿಂದ ಕಳುಹಿಸಿದ ಹೆಸರನ್ನು ಕೈಬಿಟ್ಟು ಹೊಸ ಹೆಸರು ಪ್ರಕಟಿಸಿದ ಕುರಿತು ಸಭೆಯಲ್ಲಿ ಮಾತಿನ ಸಮರಕ್ಕೆ ಕಾರಣವಾಯಿತು.

ಅಬ್ದುಲ್ ಲತೀಫ್ ಮಾತನಾಡಿ, ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿರುವ ಎ.ಸಿ.ವಿನಯ್‌ರಾಜ್ ಅವರ ಹೆಸರು ಕಳುಹಿಸಿದ್ದರೂ, ಅವರ ಹೆಸರು ಕೈಬಿಟ್ಟು ಭಾಸ್ಕರ್ ಅವರನ್ನು ನೇಮಿಸಲಾಗಿದೆ. ಆಡಳಿತ ಪಕ್ಷದವರು ತಾವಾಗಿಯೇ ನೇಮಕ ಮಾಡುವುದಾದರೆ ಕಾಂಗ್ರೆಸ್‌ನವರಲ್ಲಿ ಕೇಳುವ ಅಗತ್ಯವೇನಿತ್ತು ? ಎಂದು ವಿಷಯ ಪ್ರಸ್ತಾವಿಸಿದರು.

ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ‘ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಇಂತಹ ಹುದ್ದೆಗಳಿಗೆ ನೇಮಕ ಮಾಡುವಾಗ ಪ್ರತಿಪಕ್ಷದ ಅನುಮತಿ ಕೇಳಿದ್ದೀರಾ ? ಭಾಸ್ಕರ್‌ರವರು ದಾಖಲೆಗಳನ್ನು ನೀಡಿದ್ದು, ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು.

ಭಾಸ್ಕರ್ ಮಾತನಾಡಿ, ನಾನು ದಾಖಲೆ ನೀಡಿಲ್ಲ. ನನ್ನ ಹಿಂದಿನ ದಾಖಲೆಗಳನ್ನು ಬಳಕೆ ಮಾಡಲಾಗಿದೆ ಎಂದರು. ಭಾಸ್ಕರ್ ಅವರು ಮಾಜಿ ಮೇಯರ್ ಹಾಗೂ ಸ್ಮಾರ್ಟ್ ‌ಸಿಟಿ ಆರಂಭದ ಕಾಲದಲ್ಲಿ ನಿರ್ದೇಶಕರಾಗಿದ್ದರು. ಅವರು ಕಾರ್ಪೊರೇಟರ್ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ಲತೀಫ್ ಮಾತನಾಡಿ, ‘ಭಾಸ್ಕರ್ ಅವರು ನಿರಾಕರಿಸಿದ್ದರೂ ಅವರಿಗೆ ಒತ್ತಡ ಹಾಕುವುದು ಯಾಕೆ ?’ ಎಂದರು. ಬಿಜೆಪಿ ಇತರ ಸದಸ್ಯರು ಮಾತನಾಡಿ, ‘ಭಾಸ್ಕರ್ ಆಯ್ಕೆ ಕಾಂಗ್ರೆಸ್‌ಗೆ ಒಪ್ಪಿಗೆ ಇಲ್ಲವೇ ?’ ಎಂದರು.

ಈ ವೇಳೆ ಆಡಳಿತ-ಪ್ರತಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ಹಾಗೂ ಮಾತಿನ ಚಕಮಕಿ ಹಾಸ್ಯ ಚಟಾಕಿಗಳ ಮೂಲಕ ಸದನಲ್ಲಿ ಕೆಲ ಹೊತ್ತು ಚರ್ಚೆ ನಡೆಯಿತು.

ನಾಮನಿರ್ದೇಶನ ಸದಸ್ಯರಿಂದ ಪ್ರಮಾಣ ವಚನ

ಮಂಗಳೂರು ಪಾಲಿಕೆಯ ನೂತನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಕೆ.ರಾಧಾಕೃಷ್ಣ, ರಮೇಶ್ ಕಂಡೆಟ್ಟು, ಭಾಸ್ಕರ ಚಂದ್ರ ಶೆಟ್ಟಿ, ರಾಜೇಶ್ ಸಾಲ್ಯಾನ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

ಮುಂದಿನ ವಾರ ಟ್ರಾಫಿಕ್ ಸಭೆ

ಪಾಲಿಕೆ ಸದಸ್ಯ ನವೀನ್ ಡಿಸೋಜ ಮಾತನಾಡಿ, ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಪಾಲಿಕೆಯಲ್ಲಿ ಟ್ರಾಫಿಕ್ ಪೊಲೀಸರ ಸಭೆ ಆಯೋಜಿಸುವ ಬಗ್ಗೆ ಮೇಯರ್ ಅವರು ತಿಳಿಸಿದ್ದರು. ಆದರೆ, ಇನ್ನೂ ಕೂಡ ಸಭೆ ನಡೆದಿಲ್ಲ ಎಂದರು. ಮೇಯರ್ ದಿವಾಕರ್ ಅವರು ಮಾತನಾಡಿ, ಇತ್ತೀಚೆಗೆ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಆಯುಕ್ತರು ತುರ್ತು ಕಾರ್ಯದಲ್ಲಿ ಇದ್ದ ಕಾರಣದಿಂದ ಸಭೆ ನಡೆಯಲಿಲ್ಲ. ಹೀಗಾಗಿ ಮುಂದಿನ ವಾರ ಸಭೆ ನಡೆಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News