×
Ad

ಉಡುಪಿ: ಸ್ಥಳೀಯವಾದ ಇ-ಸಮುದಾಯ್ ಆ್ಯಪ್ ಲೋಕಾರ್ಪಣೆ

Update: 2021-01-29 20:36 IST

ಉಡುಪಿ, ಜ.29: ಸ್ಥಳೀಯವಾಗಿ ಲಭ್ಯವಾಗುವ ಕಿರಾಣಿ ಸಾಮಗ್ರಿ (ಗ್ರಾಸರಿ), ಹೊಟೇಲ್‌ಗಳ ಆಹಾರ ಸಾಮಗ್ರಿ, ಕೃಷಿ ಉತ್ಪನ್ನ ಗಳು, ಔಷಧಿ ಸಾಮಗ್ರಿಗಳ ಮಾರಾಟಕ್ಕೆ ಗ್ರಾಹಕರು ಹಾಗೂ ಮಾರಾಟಗಾರರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ದೇಶದ ಮೊತ್ತಮೊದಲ ಸ್ಥಳೀಯ ವಾಣಿಜ್ಯ ಕಂಪೆನಿ (ಎಲ್ ಕಾಮರ್ಸ್ ಕಂಪೆನಿ) ಇ-ಸಮುದಾಯ್‌ಗೆ ನಗರದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.

ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಇ-ಸಮುದಾಯ್ ಆ್ಯಪ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಹ ಸಂಸ್ಥಾಪಕ ಹಾಗೂ ಸಿಇಓ ಅನೂಪ್ ಪೈ ಮಾತನಾಡಿ, ಇದು ಗ್ರಾಹಕರು ಹಾಗೂ ಮಾರಾಟಗಾರರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಲಿದೆ ಎಂದರು.

ಗ್ರಾಹಕರು ಈ ಆ್ಯಪ್‌ನ್ನು ಬಳಸಿ ಮನೆಯಲ್ಲಿಯೇ ಕುಳಿತು ಉಡುಪಿಯ ಸ್ಥಳೀಯ ವರ್ತಕರಲ್ಲಿ ಲಭ್ಯವಿರುವ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬಹುದು. ಇದರಿಂದ ಇಬ್ಬರಿಗೂ ಲಾಭವಾಗುವ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆ ಸಿಗಲಿದೆ ಎಂದು ವಿವರಿಸಿದರು.

ಸದ್ಯ ಉಡುಪಿಯಲ್ಲಿ ಮಾತ್ರ ಇ-ಸಮುದಾಯ್ ಕಾರ್ಯನಿರ್ವಹಿಸುತ್ತದೆ. ಮುಂದೆ ಒಂದು ವರ್ಷದಲ್ಲಿ ಕನಿಷ್ಠ 100 ಎಲ್‌ಕಾಮರ್ಸ್ ತಾಣವನ್ನು ದೇಶಾದ್ಯಂತ ಪ್ರಾರಂಭಿಸುವ ಗುರಿ ಇದೆ. ಇದರಿಂದ ಉಡುಪಿಯ 800ಕ್ಕೂ ಅಧಿಕ ಸ್ಥಳೀಯ ವ್ಯಾಪಾರಸ್ಥರು ಹಾಗೂ ಉತ್ಪಾದಕರು ಇದರ ಲಾಭ ಪಡೆಯುವ ನಿರೀಕ್ಷೆ ಇದೆ ಎಂದು ಅನೂಪ್ ಪೈ ನುಡಿದರು.

ಇ-ಸಮುದಾಯ್‌ನ ಮತ್ತೊಬ್ಬ ಸಹಸ್ಥಾಪಕ ಹಾಗೂ ಸಿಬಿಓ ರವಿಚಂದ್ರನ್ ಹಳ್ದೀಪುರ್ ಮಾತನಾಡಿ, ಸದ್ಯ ಉಡುಪಿ ಆಸುಪಾಸಿ ನವರು ಮನೆಯಲ್ಲೇ ಕುಳಿತು ತಾವು ನಿತ್ಯ ಖರೀದಿಸುವ ಮಳಿಗೆಯಿಂದ ಅಗತ್ಯ ವಸ್ತುಗಳನ್ನು ಆನ್‌ಲೈನ್ ಮೂಲಕ ಮನೆಗೆ ತರಿಸಬಹುದು. ಮುಂದೆ ಬೇರೆ ಊರಿನವರೂ, ವಿದೇಶಗಳಲ್ಲಿರುವ ಸ್ಥಳೀಯರು ಉಡುಪಿಯ ಅಗತ್ಯ ವಸ್ತು ಗಳನ್ನು ಆ್ಯಪ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಇದರಿಂದ ಸ್ಥಳೀಯ ವಾಣಿಜ್ಯ ಚಟುವಟಿಕೆಗಳಿಗೆ ಒತ್ತು ದೊರೆಯಲಿದೆ. ಈ ಮೂಲಕ ಸ್ಥಳೀಯ ಆರ್ಥಿಕತೆಗೆ ಹೆಚ್ಚಿನ ಬಲ ಬರಲಿದೆ. ಸದ್ಯ ಸುಮಾರು 100 ಸ್ಥಳೀಯ ವಾಣಿಜ್ಯ ಮಳಿಗೆಗಳು ಇದರಡಿ ಬಂದಿವೆ. ಶೀಘ್ರವೇ ಇನ್ನಷ್ಟು ಇದಕ್ಕೆ ಸೇರ್ಪಡೆಗೊಳ್ಳಲಿವೆ ಎಂದು ಇ ಸಮುದಾಯ್‌ನ ಉಡುಪಿ ವೃತ್ತ ಮುಖ್ಯಸ್ಥ ಶಿವಾನಂದ ಭಟ್ ತಿಳಿಸಿದರು.

ಸ್ಥಳೀಯವಾಗಿ ಎಲ್‌ಕಾಮರ್ಸ್‌ಗೆ ಉತ್ತಮ ಭವಿಷ್ಯವಿದೆ. ಇದನ್ನು ನಾವು ಬಳಸಿಕೊಳ್ಳಲು ಪ್ರಯತ್ನಿಸಲಿದ್ದೇವೆ. ಕಿರಾಣಿ ವಸ್ತುಗಳು, ಹೊಟೇಲ್‌ಗಳ ಆಹಾರ , ಕೃಷಿ ಉತ್ಪನ್ನ ಹಾಗೂ ಔಷಧ ಸಾಮಗ್ರಿಗಳ ಸೇವೆ ಈಗಾಗಲೇ ಪ್ರಾರಂಭ ಗೊಂಡಿದೆ. ಅದನ್ನು ಇನ್ನಷ್ಟು ವಿಸ್ತರಿಸುವ ಕಾರ್ಯ ನಡೆಯುತ್ತಿದೆ. ಮುಂದೆ ಉಡುಪಿಯ ಗೃಹ ಉತ್ಪನ್ನಗಳಾದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿಗಳನ್ನು ನಾವು ಜಾಗತಿಕ ಮಟ್ಟದಲ್ಲಿ ತಲುಪಿಸಲು ಪ್ರಯತ್ನಿಸಲಿದ್ದೇವೆ ಎಂದವರು ಹೇಳಿದರು.

ಸಂಸ್ಥೆಯ ಎಚ್.ಆರ್.ವಿಭಾಗದ ಮುಖ್ಯಸ್ಥ ಸುದರ್ಶನ್ ಸಿಂಹನ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News