ಭಾಷೆ ಪ್ರೀತಿಯನ್ನು ಹುಟ್ಟಿಸಬೇಕು ವಿನಃ ದ್ವೇಷವನ್ನಲ್ಲ: ಡಾ. ಭರತ್ ಕುಮಾರ್ ಪೊಲಿಪು
ಪಡುಬಿದ್ರಿ : ನಾವು ಆಡುವ ಭಾಷೆ ನಮ್ಮ ಮನಸ್ಥಿತಿಯನ್ನು ಪ್ರಕಟಿಸುತ್ತದೆ. ಭಾಷೆ ಪ್ರೀತಿಯನ್ನು ಹುಟ್ಟಿಸಬೇಕು ವಿನಃ ದ್ವೇಷವನ್ನು ಉಂಟು ಮಾಡದಂತೆ ಎಚ್ಚರ ವಹಿಸಬೇಕು ಎಂದು ಕಾಪು ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಾ.ಭರತ್ ಕುಮಾರ್ ಪೊಲಿಪು ಹೇಳಿದರು.
"ಬದುಕಿಗೆ ಬೆಳಕು" ಪರಿಕಲ್ಪನೆಯಲ್ಲಿ ಪಡುಬಿದ್ರಿ ಶ್ರೀಮಹಾಲಿಂಗೇಶ್ವರ, ಮಹಾಗಣಪತಿ ದೇವಳದ ಪ್ರಾಂಗಣದಲ್ಲಿ ಎಸ್‍ಬಿವಿಪಿ ಹಿ.ಪ್ರಾ.ಶಾಲೆ, ಪಡುಬಿದ್ರಿ ಗಣಪತಿ ಪ್ರೌಢ ಶಾಲೆ ಹಾಗೂ ಶಾಲಾ ಹಳೆವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ "ಶ್ರೀವಿಬುಧೇಶತೀಥ ವೇದಿಕೆ"ಯಲ್ಲಿ ಶುಕ್ರವಾರ ನಡೆದ ಕಾಪು ತಾಲ್ಲೂಕು ಮೂರರನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಕಲೆ ಮತ್ತು ಸಾಹಿತ್ಯದ ಮೂಲ ಉದ್ದೇಶ ಸತ್ಯದ ಶೋಧನೆ ಮತ್ತು ಮಾನವೀಯತೆಯ ಪ್ರತಿಪಾಧನೆಯನ್ನು ಹುಟ್ಟುಹಾಕಿದೆ. ನಾಯಕತ್ವ ಸದಾ ಸತ್ಯದ ಪರವಾಗಿರುತ್ತದೆ. ಸತ್ಯ ಅಹಿಂಸೆಯ ಪರವಾಗಿರುತ್ತದೆ. ಭಾಷೆಯ ಮೂಲಕವೇ ಸಾಹಿತ್ಯ ಸೃಷ್ಟಿಯಾಗಿ ಅದರ ಮೂಲಕ ಬದುಕನ್ನು ಅರಿಯಲು ಸಹಕಾರಿಯಾಗುತ್ತದೆ. ಭಾಷೆ ಆಡುವುದರಿಲಿ. ಬರೆಯುವವುದದರಿರಲಿ, ತನ್ನ ಸುತ್ತಲಿನ ಸಮಾಜದ ಸಂವೇದನಯನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಹಿತ್ಯ ಮನದ ಕಾವನ್ನು ತಣಿಸುತ್ತದೆ. ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಕಿರಿಯ ಸಾಹಿತಿಗಳಿಗೆ ವಿಶಾಲವಾದ ಅವಕಾಶ ತೆರೆದಿಡುತ್ತದೆ. ಭಾಷೆ, ಸಾಹಿತ್ಯ ಯಾವತ್ತೂ ಶ್ರೀಮಂತರ ಸೊತ್ತಾಗದೆ ಮಧ್ಯಮ ವರ್ಗದ ಸೊತ್ತಾಗಿದೆ. ಕನ್ನಡದ ಬಗ್ಗೆ ನಮ್ಮಲ್ಲಿರುವ ತಾತ್ಸಾರ ಭಾವನೆ ಯನ್ನು ಬಿಡಬೇಕು. ಕನ್ನಡದ ಉದ್ದಾರಕ್ಕೆ ಕೈಜೋಡಿಸಬೇಕು ಎಂದರು.
ಸತ್ಯ ಸಮ್ಮೇಳನದಲ್ಲಿ ಗ್ರಂಥಾವರಣ ಮಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸದಸ್ಯತ್ವ ನೋಂದಣಿಯಲ್ಲಿ ಉಡುಪಿ ಜಿಲ್ಲೆ ಹಿಂದಿದೆ. ಸಾಹಿತ್ಯ ಪರಿಷತ್‍ನ ಸದಸ್ಯತ್ವ ನೋಂದಣಿ ಒತ್ತು ನೀಡಿ ಪರಿಷತ್‍ನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದ ಅವರು, ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಯೋಜನೆ ಸಿದ್ಧಪಡಿಸಿ ಸಾಹಿತ್ಯ ಪರಿಷತ್ ಮುನ್ನಡೆಯಬೇಕು. ಜಿಲ್ಲಾಡಳಿತ ಅದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ನಿಟಕಪೂರ್ವ ಸಮ್ಮೇಳನಾಧ್ಯಕ್ಷ, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಭರತ್ ಕುಮಾರ್ ಪೊಲಿಪುರವರಿಗೆ ಧ್ವಜ ಹಸ್ತಾಂತರಿಸಿದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರು, ಕಾಪು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಜಾನಪದ ಸಂಶೋಧಕ ಡಾ.ವೈ.ಎನ್.ಶೆಟ್ಟಿ ಪಡುಬಿದ್ರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಶ್ರೀದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ,, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ., ಇಲಾಖೆಯ ಉಮಾ, ಶಂಕರ ಸುವರ್ಣ, ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜ್ ಮೋಹನ್ ಹೆಗ್ಡೆ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಅನಂತ ಪಟ್ಟಾಭಿರಾವ್ ಸ್ವಾಗತಿಸಿದರು. ಕಾಪು ಪೊಲಿಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ ಜಿ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಕಸ್ತೂರಿ ರಾಮಚಂದ್ರ ವಂದಿಸಿದರು.
ಮೆರವಣಿಗೆ
ಪಡುಬಿದ್ರಿ ಶ್ರೀದೇವಳದ ಮಹಾದ್ವಾರದಿಂದ ಸಮ್ಮೇಳನಾಧ್ಯಕ್ಷ ಡಾ.ಭರತ್‍ಕುಮಾರ್ ಪೊಲಿಪುರವರ ಪೂರ್ಣಕುಂಭ ಸ್ವಾಗತ ದೊಂದಿಗೆ ಬರಮಾಡಿಕೊಳ್ಳಲಾಯಿತು. ಕನ್ನಡಮಾತೆ ಶ್ರೀಭುವನೇಶ್ವರೀ ದೇವಿಯ ಶೋಭಾಯಾತ್ರೆಯನ್ನು ಉಡುಪಿ ಶ್ರೀಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ನ್ಯಾಯವಾದಿ ಪ್ರದೀಪ್ ಕುಮಾರ್ ಉದ್ಘಾಟಿಸಿದರು.
ಧ್ವಜವಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ರಾಷ್ಟ್ರ ಧ್ವಜ ಅರಳಿಸಿದರು. ಪರಿಷತ್ತು ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ನೆರವೇರಿಸಿದರು. ಕಲಾಕಾರರಾದ ನರೇಂದ್ರ ಎಚ್, ಅಶೋಕ್ ಕೆ, ನಮ್ರತಾ ಅಮ್ಮಣ್ಣಾಯ, ರೂಪಾ ವಸುಂದರಾ ಆಚಾರ್ಯರ ಚಿತ್ರಕಲಾ ಪ್ರದರ್ಶನವನ್ನು ಉದ್ಯಮಿ ನವೀನ್‍ಚಂದ್ರ ಶೆಟ್ಟಿ ಪಡುಬಿದ್ರಿ ಹಾಗೂ ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅರ್ಚಕರಾದ ವೇದಮೂರ್ತಿ ಪದ್ಮನಾಭ ಭಟ್ ನೆರವೇರಿಸಿದರು.