ಧರ್ಮಕ್ಕಿಂತ ಮನುಷ್ಯತ್ವ ಮುಖ್ಯ : ಫಾ. ಕ್ಲಿಫ್ಫೊರ್ಡ್ ಫೆರ್ನಾಂಡಿಸ್
ಮಂಗಳೂರು, ಜ. 29: ಧರ್ಮಾ, ವಿಚಾರಗಳು ಮನೆಯಲ್ಲಿ ಆಚರಿಸಬೇಕು. ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಸಮಾನರು. ಇಲ್ಲಿ ಧರ್ಮಕ್ಕಿಂತಲೂ ಮನುಷ್ಯತ್ವಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದು ಜೆಪ್ಪು ಸೈಂಟ್ ಜೋಸೆಫ್ ಸೆಮಿನರಿ ಕಾಲೇಜಿನ ಪ್ರಾಧ್ಯಾಪಕ ಫಾ. ಕ್ಲಿಫ್ಫೊರ್ಡ್ ಫೆರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.
ಯುನಿವೆಫ್ ಕರ್ನಾಟಕ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಸೀರತ್ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಒಳ್ಳೆಯ ವಿಚಾರಗಳು ಯಾವುದೇ ಧರ್ಮದಲ್ಲಿ ಇದ್ದರೂ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ-ಭೇದವಿಲ್ಲದೆ ಸಹೋದರತ್ವ ಭಾವನೆಯಿಂದ ಜೀವನ ಸಾಗಿಸಬೇಕು. ಮನುಷ್ಯರಿಗೆ ಮೊದಲು ಗೌರವ ಸೂಚಿಸುವುದನ್ನು ಕಲಿಯ ಬೇಕು. ಮನುಷ್ಯತ್ವವೊಂದೇ ಜಗತ್ತನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.
ಉತ್ತರ ಭಾರತದಲ್ಲಿ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಮೌಲ್ಯದ ಕೋಣವೊಂದನ್ನು ಖರೀದಿಸಿದ ಸುದ್ದಿಯನ್ನು ಈತ್ತೀಚೆಗೆ ಗಮನ ಸೆಳೆಯಿತು. ಮನುಷ್ಯನಿಗೆ ಕಷ್ಟಕಾಲದಲ್ಲಿ ರಕ್ತ ಬೇಕೆಂದಾಗ ಮನುಷ್ಯನ ರಕ್ತವೇ ಬೇಕಾಗುತ್ತದೆಯೇ ವಿನಃ ಆ ಖರೀದಿಸಿದ ಕೋಣದ ರಕ್ತವಲ್ಲ. ಯಾವುದೇ ರೋಗಿಯು ತನ್ನದೇ ಧರ್ಮದ ವ್ಯಕ್ತಿಯ ರಕ್ತ ಬೇಕೆಂದು ಕೇಳುವುದಿಲ್ಲ. ಆ ರಕ್ತ ಮನುಷ್ಯರದ್ದು ಆದಲ್ಲಿ ಚಿಂತೆಯೇ ಇಲ್ಲ. ಎಲ್ಲರ ರಕ್ತವೂ ಒಂದೇ ಆಗಿದೆ. ಇದೇ ಮನುಜಮತವನ್ನು ಪ್ರತಿಪಾದಿಸುತ್ತದೆ ಎಂದರು.
ಕೇಮಾರು ಸಾಂದೀಪನಿ ಮಠದ ಈಶ ವಿಠ್ಠಲ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ಸಮಾಜಗಳ ನಡುವಿನ ಸಂಬಂಧವನ್ನು ವಿವರಿಸಿದರು. ಪ್ರವಾದಿ ಮುಹಮ್ಮದ್‌ರ ಜೀವನ ಹಾಗೂ ಇಸ್ಲಾಂನಲ್ಲಿನ ಆದರ್ಶ ತತ್ವಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿ ದರು. ಎಲ್ಲಕ್ಕಿಂತ ಮಾನವೀಯತೆಯೇ ಮಿಗಿಲಾದದ್ದನ್ನು ಎಂಬುದನ್ನು ಅವರು ವಿವರಿಸಿದರು.
ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, ನ.27ರಿಂದ ಜ.29ರವರೆಗೆ 64 ದಿನಗಳ ಕಾಲ ಪ್ರವಾದಿ ಮುಹಮ್ಮದ್‌ರ ಜೀವನ ಮತ್ತು ಇಸ್ಲಾಂನ ತತ್ವ ಆದರ್ಶಗಳನ್ನು ಸಾಮಾನ್ಯ ಜನರಿಗೂ ತಿಳಿಸುವಂತಹ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಸೀರತ್ ಅಭಿಯಾನ ಯಶಸ್ವಿಯಾಗಿದೆ. ಯುನಿವೆಫ್ ಕರ್ನಾಟಕದಿಂದ ಜಿಲ್ಲೆಯ 10 ಕಡೆ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. 50ರಿಂದ 60 ಪ್ರದೇಶಗಳಲ್ಲಿ ಚಿಕ್ಕಪುಟ್ಟ ಸಭೆ ಜರುಗಿದವು. 40 ಸಾವಿರಕ್ಕೂ ಅಧಿಕ ಸೀರತ್ ಅಭಿಯಾನದ ಕರಪತ್ರ ಹಂಚಲಾಯಿತು. ಸೀರತ್ ಅಭಿಯಾನಕ್ಕೆಂದೇ ವಿಶೇಷ ಪುರವಣಿಯನ್ನು ಕೂಡ ಲೋಕಾರ್ಪಣೆ ಗೊಳಿಸಲಾಯಿತು. ಸೀರತ್ ಅಭಿಯಾನ ಯಶಸ್ಸಿನತ್ತ ಸಾಗುತ್ತಿರುವುದು ಮತ್ತಷ್ಟು ಹುಮ್ಮಸ್ಸು ತಂದಿದೆ ಎಂದರು.
‘ವಾರ್ತಾಭಾರತಿ’ ಪ್ರಧಾನ ಸಂಪಾದಕರಾದ ಅಬ್ದುಲ್ ಸಲಾಂ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕದ ಕಾರ್ಯದರ್ಶಿಗಳಾದ ಯು.ಕೆ. ಖಾಲೀದ್, ಸೈಫುದ್ದೀನ್, ಸಹ ಸಂಚಾಲಕ ಅತಿಕುರ್ರಹ್ಮಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಚಾಲಕ ವಕಾಝ್ ಅಶ್ಲನ್ ಸ್ವಾಗತಿಸಿದರು.