×
Ad

ಪೊಲೀಸ್ ಮೇಲೆ ಮಾರಕಾಸ್ತ್ರದಿಂದ ದಾಳಿ ಪ್ರಕರಣ: ‘ಮಾಯಾ ಗ್ಯಾಂಗ್’ಗೆ ‘ಕಾರ್ಖಾನಾ ಗ್ಯಾಂಗ್’ ನಂಟು- ಕಮಿಷನರ್

Update: 2021-01-29 22:01 IST

ಮಂಗಳೂರು, ಜ.29: ನಗರದಲ್ಲಿ ಕರ್ತವ್ಯನಿರತ ಪೊಲೀಸ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಆರೋಪದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ‘ಮಾಯಾ ಗ್ಯಾಂಗ್’ನ ಸದಸ್ಯರೊಂದಿಗೆ ‘ಕಾರ್ಖಾನಾ ಗ್ಯಾಂಗ್’ ಹೆಸರಿನ ಇನ್ನೊಂದು ತಂಡ ಕೈಜೋಡಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ವಶವಾಗಿರುವ ಇಬ್ರಾಹೀಂ, ಅಕ್ಬರ್ ಮತ್ತು ಮುಹಮ್ಮದ್ ಹನೀಫ್ ಎಂಬವರು ‘ಕಾರ್ಖಾನಾ ಗ್ಯಾಂಗ್’ನ ಸದಸ್ಯರು. ಇದರಲ್ಲಿ ಓರ್ವ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು, ಉಳಿದವರ ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ನವಾಝ್ ಮತ್ತು ಮುಹಮ್ಮದ್ ಖಾಯಿಸ್ ಎಂಬವರು ‘ಮಾಯಾ ಗ್ಯಾಂಗ್’ ಮತ್ತು ‘ಕಾರ್ಖಾನಾ ಗ್ಯಾಂಗ್’ಗಳ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಇಬ್ಬರನ್ನು, ಬಳಿಕ ಆರು ಮಂದಿಯನ್ನು ಹಾಗೂ ಇದೀಗ ಮೂವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದರು.

ಕಾರ್ಖಾನಾ ಗ್ಯಾಂಗ್‌ನಲ್ಲಿ ಸುಮಾರು 25- 40 ವರ್ಷ ವಯಸ್ಸಿನವರು ತೊಡಗಿಸಿಕೊಂಡಿದ್ದಾರೆ. ಇವರು ಬೇರೆ ಬೇರೆ ಚಟುವಟಿಕೆ, ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇವರನ್ನು ಫಾಲೋ ಮಾಡುವವರು, ಇವರಿಗೆ ಸಲಹೆ ನೀಡುವವರು ಕೂಡ ಅನೇಕ ಮಂದಿ ಇದ್ದಾರೆ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

''ಪೊಲೀಸರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಅವರು ಧೈರ್ಯದಿಂದ ಕೆಲಸ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಬಹುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು''.
- ಎನ್.ಶಶಿಕುಮಾರ್,
ಮಂಗಳೂರು ನಗರ ಪೊಲೀಸ್ ಆಯುಕ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News