ಲಂಕಾ ಮಾನವಹಕ್ಕು ಪರಿಸ್ಥಿತಿ ಕುರಿತ ವಿಶ್ವಸಂಸ್ಥೆ ವರದಿಯ ಜಾಗರೂಕ ಪರಿಶೀಲನೆ: ಅಮೆರಿಕ

Update: 2021-01-29 18:11 GMT

ವಾಶಿಂಗ್ಟನ್, ಜ. 29: ಶ್ರೀಲಂಕಾದಲ್ಲಿ ನೆಲೆಸಿರುವ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆ ಸಿದ್ಧಪಡಿಸಿರುವ ವರದಿಯನ್ನು ಜಾಗರೂಕವಾಗಿ ಪರಿಶೀಲಿಸುತ್ತಿರುವುದಾಗಿ ಅಮೆರಿಕ ಹೇಳಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಉತ್ತರದಾಯಿತ್ವವಿಲ್ಲದ ಹಿಂಸಾಚಾರ, ಸರಕಾರಿ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಸೇನಾ ಪ್ರವೇಶ, ಜನಾಂಗೀಯ-ರಾಷ್ಟ್ರೀಯವಾದಿ ಉನ್ಮಾದದ ಹೆಚ್ಚಳ ಮತ್ತು ಮಾನವಹಕ್ಕುಗಳ ಹೋರಾಟಗಾರರು ನಿರಂತರವಾಗಿ ಎದುರಿಸುತ್ತಿರುವ ಬೆದರಿಕೆ ಮುಂತಾದ ಆಘಾತಕಾರಿ ಪ್ರವೃತ್ತಿಗಳನ್ನು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಈ ಬೆಳವಣಿಗೆಗಳ ಮೇಲೆ ಅಂತರ್‌ರಾಷ್ಟ್ರೀಯ ಸಮುದಾಯವು ನಿಗಾ ಇಡುವ ಹಾಗೂ ಬಲವಾದ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

 ‘‘ಶ್ರೀಲಂಕಾದಲ್ಲಿ ಈಗ ನೆಲೆಸಿರುವ ಪರಿಸ್ಥಿತಿಯು ಗಂಭೀರ ಮಾನವಹಕ್ಕುಗಳ ಉಲ್ಲಂಘನೆಗೆ ಹಾದಿ ಮಾಡಿಕೊಡುವ ನೀತಿಗಳು ಮತ್ತು ಕಾರ್ಯವಿಧಾನಗಳು ಮರಳಲು ಪ್ರಶಸ್ತವಾಗಿದೆ’’ ಎಂದು ವರದಿ ತಿಳಿಸಿದೆ.

‘‘ಶ್ರೀಲಂಕಾದ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಸಿದ್ಧಪಡಿಸಿರುವ ಮಹತ್ವದ ವರದಿಯನ್ನು ನಾವು ಜಾಗರೂಕವಾಗಿ ಪರಿಶೀಲಿಸುತ್ತಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದರು.

ಸರಕಾರದಿಂದ ತನಿಖೆ, ವಿಚಾರಣೆಗಳ ಬುಡಮೇಲು: ವಿಶ್ವಸಂಸ್ಥೆ ವರದಿ

ಶ್ರೀಲಂಕಾದಲ್ಲಿನ ಸಶಸ್ತ್ರ ಸಂಘರ್ಷ ಕೊನೆಗೊಂಡ 12 ವರ್ಷಗಳ ಬಳಿಕ, ಗಂಭೀರ ಮಾನವಹಕ್ಕು ಉಲ್ಲಂಘನೆ ಮತ್ತು ದೌರ್ಜನ್ಯಗಳನ್ನು ನಡೆಸಿದವರು ಕಾನೂನಿನ ಭಯವಿಲ್ಲದೆ ಮುಕ್ತವಾಗಿ ಓಡಾಡುತ್ತಿದ್ದಾರೆ ಹಾಗೂ ಇನ್ನಷ್ಟು ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಈ ಪ್ರವೃತ್ತಿಯು ದೇಶದಲ್ಲಿ ಈಗ ಸಾಮಾನ್ಯ ಎಂಬಂತಾಗಿದೆ.

   ಮಾನವಹಕ್ಕು ಉಲ್ಲಂಘನೆ ಮತ್ತು ದೌರ್ಜನ್ಯ ಪ್ರಕರಣಗಳ ಬಗ್ಗೆ ನಡೆಯುತ್ತಿರುವ ತನಿಖೆ ಮತ್ತು ವಿಚಾರಣೆಗಳನ್ನು ಬುಡಮೇಲುಗೊಳಿಸುವ ಕೆಲಸವನ್ನು ದ್ವೀಪರಾಷ್ಟ್ರದ ಪ್ರಸಕ್ತ ಸರಕಾರವು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದೆ. ಕೆಲವು ದೌರ್ಜನ್ಯ ಪ್ರಕರಣಗಳಲ್ಲಿ ಈ ಹಿಂದೆ ಏನಾದರೂ ಕಿಂಚಿತ್ ಪ್ರಗತಿ ಆಗಿದ್ದರೂ ಅದನ್ನು ಸರಕಾರ ವಿಫಲಗೊಳಿಸುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ವರದಿ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News