ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಘಟಕ ಪರಿಶೀಲನೆಗೆ ತಾಪಂ ಅಧ್ಯಕ್ಷರ ನಿಯೋಗಕ್ಕೆ ಅವಕಾಶ ನಿರಾಕರಣೆ
ಬಂಟ್ವಾಳ, ಜ.31: ಉದ್ಘಾಟನೆಗೆ ಸಿದ್ಧವಾಗಿರುವ ತಾಲೂಕಿನ ಸರಪಾಡಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಘಟಕದ ಪರಿಶೀಲನೆಗೆ ಶನಿವಾರ ತೆರಳಿದ ತಾಲೂಕು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ನಿಯೋಗಕ್ಕೆ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಘಟಕದ ಒಳಗೆ ಪ್ರವೇಶಿಸಲು ಬಿಡದೆ ಅಡ್ಡಿಪಡಿಸಿದರು.
ಸರಪಾಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಿ.ರಮಾನಾಥ ರೈ ಸಚಿವರಾಗಿದ್ದ ಸಂದರ್ಭದಲ್ಲಿ 33.15 ಕೋಟಿ ರೂ. ಅನುದಾನ ಒದಗಿಸಿದ್ದರು. ಇದೀಗ ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ ಎನ್ನಲಾಗಿದೆ.
ನೀರು ಶುದ್ದೀಕರಣ ಘಟಕದ ಕಾಮಗಾರಿಯ ಪರಿಶೀಲನೆಗೆಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ ನೇತೃತ್ವದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ತಾಲೂಕು ಪಂಚಾಯತ್ ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ್ ಜೈನ್ ಸಹಿತ ಹಲವು ಪ್ರಮುಖರು ತೆರಳಿದ್ದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಅಡ್ಡಿ ಪಡಿಸಿದರು.
ನಿಯೋಗ ಘಟಕದ ಬಳಿ ಆಗಮಿಸಿದ ಸಂದರ್ಭದಲ್ಲಿ ಘಟಕದ ಗೇಟ್ ಗೆ ಬೀಗ ಜಡಿಯಲಾಗಿತ್ತು. ಗೇಟ್ ನ ಬೀಗ ತೆಗೆದು ಘಟಕದ ಪರಿಶೀಲನೆಗೆ ಅವಕಾಶ ಮಾಡಿಕೊಡುವಂತೆ ನಿಯೋಗ ಪೊಲೀಸರಲ್ಲಿ ಮಾಡಿದ ಮನವಿಗೆ, ಘಟಕಕ್ಕೆ ಸಂಬಂಧಿಸಿದ ಇಂಜಿನಿಯರ್ ಅವರ ಅನುಮತಿ ಇಲ್ಲದೆ ಘಟಕದ ಒಳಗೆ ಪ್ರವೇಶಿಸಲು ಪೊಲೀಸರು ನಿಯೋಗಕ್ಕೆ ಅನುಮತಿ ನಿರಾಕರಿಸಿದರು.
ಸ್ಥಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷ, ನಾಯಕರಿಗೆ ಜೈಕಾರ ಘೋಷಣೆ ಕೂಗಿದರೆ, ಎರಡೂ ಪಕ್ಷದವರು ತಮ್ಮ ವಿರೋಧ ಪಕ್ಷಗಳ ನಾಯಕರಿಗೆ ಧಿಕ್ಕಾರ ಘೋಷಣೆ ಕೂಗಿದರು. ಒಂದು ಹಂತದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಹೊಯ್ ಕೈ ನಡೆಯುವ ಹಂತಕ್ಕೆ ತಲುಪಿತು.
ನೀರಿನ ಘಟಕದ ಪರಿಶೀಲನೆಗೆ ಅವಕಾಶ ನೀಡುವ ವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ತಾಲೂಕು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ನಿಯೋಗ ಸ್ಥಳದಲ್ಲಿ ಧರಣಿ ಕುಳಿತಿದೆ.