ಗಾಂಧಿತ್ವದೆಡೆಗೆ ವಾಪಸಾಗುವ ಸಮಯವಿದು: ಗೀತಾ ಕೃಷ್ಣನ್
ಮಂಗಳೂರು, ಜ.30: ದೇಶದಲ್ಲಿ ಇಂದು ಕಂಡು ಬರುತ್ತಿರುವ ಅರಾಜಕತೆಗಳು ನಾವು ಸ್ವಾತಂತ್ರ ಪೂರ್ವದಲ್ಲಿ ನಡೆಸಿದ ಚಳವಳಿಗಳಿಂತಲೂ ಹೆಚ್ಚಿನ ಹೋರಾಟವನ್ನು ನಡೆಸಬೇಕಾದ ಅಗತ್ಯವನ್ನು ಸೃಷ್ಟಿಸಿದೆ. ಅದಕ್ಕಾಗಿ ನಾವು ಮತ್ತೆ ಗಾಂಧಿತ್ವದೆಡೆಗೆ ವಾಪಸಾಗುವ ಸಮಯ ಬಂದಿದೆ ಎಂದು ಎಐಸಿಸಿಯ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಸಂಚಾಲಕ ಗೀತಾ ಕೃಷ್ಣನ್ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಹಾತ್ಮ ಗಾಂಧಿಯವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸೆಯ ಚಳವಳಿಯನ್ನು ನೇತೃತ್ವ ವಹಿಸಿದ್ದ ಗಾಂಧೀಜಿ ಇಂದಿಗೂ ವಿಶ್ವಮಾನ್ಯರಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಕೊಂದವರನ್ನು ವಿಜೃಂಭಿಸುವ ಈ ಕಾಲಘಟ್ಟದಲ್ಲಿ ಗಾಂಧಿಜಿಯ ತತ್ವ ಚಿಂತನೆಗಳು ನಮ್ಮ ಹೋರಾಟಕ್ಕೆ ಅತೀ ಅಗತ್ಯ ಎಂದವರು ಹೇಳಿದರು.
ಪುಣ್ಯತಿಥಿ ಆಚರಣೆ ದೇಶದ ಸಂಸ್ಕೃತಿ
ದೇಶ ಮಾತ್ರವಲ್ಲದೆ, ವಿಶ್ವದಲ್ಲಿ ಇಂದಿಗೂ ಗಾಂಧೀಜಿಯಂತೆ ಮಹತ್ವ ಹೊಂದಿರುವ, ಗೌರವ ಹೊಂದಿರುವ ಮಹಾತ್ಮರು ಇನ್ನೊಬ್ಬರಿಲ್ಲ. ಅವರು ದೇಶಕ್ಕಾಗಿ ನೀಡಿದ ತ್ಯಾಗ, ಆದರ್ಶಗಳನ್ನು ಸ್ಮರಿಸಿಕೊಳ್ಳಲು ಪುಣ್ಯ ತಿಥಿಯನ್ನು ಆಚರಿಸಲಾಗುತ್ತದೆ. ದೇಶದ ಮಹಾತ್ಮರ ಜನ್ಮ ದಿನ ಆಚರಿಸುವುದು, ಪುಣ್ಯ ತಿಥಿಯ ಮೂಲಕ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ದೇಶದ ಸಂಸ್ಕೃತಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ನಮ್ಮ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಪುಣ್ಯತಿಥಿ ಆಚರಿಸುವುದು ಭಾರತೀಯ ಸಂಸ್ಕೃತಿ. ಬಿಜೆಪಿಯವರಿಗೆ ಭಾರತೀಯ ಸಂಸ್ಕೃತಿಯ ಅರಿವಿಲ್ಲ. ಹಾಗಾಗಿಯೇ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಟೀಕೆ ಮಾಡುತ್ತಾರೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಮಾಜಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೋ ಮಹಾತ್ಮ ಗಾಂಧೀಜಿಯನ್ನು ಸ್ಮರಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೋ, ಅಬ್ದುಲ್ ರವೂಫ್, ಶಶಿಧರ ಹೆಗ್ಡೆ, ಅಪ್ಪಿ, ಮುಹಮ್ಮದ್ ಮೋನು, ಚಮನ್ ಫರ್ಝಾನ, ಸುರೇಶ್ ಶೆಟ್ಟಿ, ನವೀನ್ ಭಂಡಾರಿ, ಶುಭೋದಯ ಆಳ್ವ, ಸವಾದ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.