ಡಿಸಿಎಂ ಲಕ್ಷ್ಮಣ್ ಸವದಿಗೆ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸನ್ಮಾನ
ಮಂಗಳೂರು, ಜ.30: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಾಡಿನ ಜನತೆ ಹೆಚ್ಚಿನ ಅಭಿವೃದ್ಧಿಯ ನಿರೀಕ್ಷೆ ಇರಿಸಿದ್ದು, ಅದು ಹುಸಿಯಾಗದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದ
ಬಳಿಕ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಬಜೆಟ್ ಮಂಡನೆ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ನೆರೆಹಾವಳಿ, ಕೊರೋನ ಬಳಿಕ ಈಗ ರಾಜ್ಯದ ಆರ್ಥಿಕತೆ ನಿಧಾನವಾಗಿ ಚೇತರಿಸುತ್ತಿದೆ. ಪಕ್ಷ ಸಂಘಟನೆ ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಜನರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ ಎಂದವರು ಹೇಳಿದ್ದಾರೆ.
ಮಂಗಳೂರು ಕಾರ್ಯಕರ್ತರಿಗೆ ನೆರವಿಗೆ ಸಿದ್ಧ
ಮಂಗಳೂರಿನ ಕಾರ್ಯಕರ್ತರು ಯಾವುದೇ ಕೆಲಸಕ್ಕೆ ಬೆಂಗಳೂರಿಗೆ ಬಂದರೆ, ನಿಮ್ಮ ಕೆಲಸ ಮಾಡಿಕೊಡಲು ನಾನು ಸದಾ ಸಿದ್ಧ ಎಂದು ಅವರು ಹೇಳಿದರು.
ದ.ಕ. ಮತ್ತು ಉಡುಪಿಯ ಬಿಜೆಪಿಯ ಕಾರ್ಯಕರ್ತರ ಬಗ್ಗೆ ನಾನು ಕೇಳಿ ತಿಳಿದಿದ್ದೇನೆ. ಬೇರೆ ಬೇರೆ ಜಿಲ್ಲೆಯ ಕಾರ್ಯಕರ್ತರನ್ನು ಗಮನಿಸಿದ್ದೇನೆ. ಆದರೆ ಪಕ್ಷ ನಿಷ್ಠೆ ಮತ್ತು ಗೌರವಕ್ಕೆ ಬೇರೆ ಜಿಲ್ಲೆಯವರಿಗಿಂತ ಮಂಗಳೂರಿನ ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಇದ್ದಾರೆ. ಅದಕ್ಕಾಗಿ ಇಲ್ಲಿನ ಕಾರ್ಯಕರ್ತರ ಬಗ್ಗೆ ನನಗೆ ವಿಶೇಷ ಅಭಿಮಾನ ಇದೆ. ಇಲ್ಲಿನ ಕಾರ್ಯಕರ್ತರು ಬೆಂಗಳೂರಿಗೆ ಬಂದಾಗ ಕಚೇರಿಗೆ ಅಥವಾ ನನ್ನ ಮನೆಗೆ ಭೇಟಿ ನೀಡಿ, ನಿಮಗೆ ನಮ್ಮ ಬಾಗಿಲು ದಿನದ 24 ಗಂಟೆಯೂ ತೆರೆದಿರುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಭಾಗ ಸಹ ಪ್ರಭಾರಿ ರಾಜೀವ್ ಕಾವೇರಿ, ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೈಸೂರು ಇಲೆಕ್ಟ್ರಿಕಲ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ಉಪಸ್ಥಿತರಿದ್ದರು.