ಕನ್ನಡವನ್ನು ವಿದ್ಯಾರ್ಥಿಗಳ ಕಿವಿಗೆ ಮಾತ್ರ ಇಳಿಸದೇ ಹೃದಯಕ್ಕೆ ತಲುಪಿಸುವ ಶಿಕ್ಷಣ ನಮ್ಮದಾಗಬೇಕಿದೆ: ಮನೋಹರ್ ಪ್ರಸಾದ್
ಕಾರ್ಕಳ, ಜ.30: ಕನ್ನಡ ಸಾಹಿತ್ಯ ಸಮ್ಮೇಳನಗಳು ಹೊಸ ಅನುಸಂಧಾನಗಳನ್ನು ಹುಟ್ಟುಹಾಕಬೇಕು. ಕನ್ನಡದ ಪ್ರೀತಿಯನ್ನು ವೃದ್ಧಿಸಬೇಕು ಆಗ ಮಾತ್ರ ಕನ್ನಡ ಸಮ್ಮೇಳನ ಯಶಸ್ಸು ಕಾಣಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ವತಿಯಿಂದ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸ-ಹಿತವಾಗಿರುವುದೇ ಸಾಹಿತ್ಯ. ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪುಸ್ತಕ ಓದಿನಲ್ಲಿ ಏಕಾಗ್ರತೆ ಸಾಧಿಸುವುದು ಬಹಳ ಕಷ್ಟವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಈ ಧೋರಣೆ ಬದಲಾಗಬೇಕಿದೆ ಕನ್ನಡವನ್ನು ವಿದ್ಯಾರ್ಥಿಗಳ ಕಿವಿಗೆ ಮಾತ್ರ ಇಳಿಸದೇ ಹೃದಯಕ್ಕೆ ಮುಟ್ಟಿಸುವ ಶಿಕ್ಷಣ ಇಂದಿನ ಅಗತ್ಯ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಉನ್ನತ ಸ್ಥಾನಮಾನ ಅಲಂಕರಿಸಿರುವುದು ನಾವು ಹೆಮ್ಮೆ ಪಡುವ ವಿಚಾರ ಎಂದವರು ನುಡಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನೀಲ್ ಕುಮಾರ್, ಸಾಹಿತ್ಯ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿದ್ದು, ಸಾಹಿತ್ಯ ಉಳಿದಲ್ಲಿ ಮಾತ್ರವೇ ಮಾನವೀಯತೆ ನೆಲೆಗೊಳ್ಳಲು ಸಾಧ್ಯ. ಸಾಹಿತ್ಯ ಚಟುವಟಿಕೆ ನಿರಂತರವಾಗಿ ನಡೆದಲ್ಲಿ ಯುವ ಪೀಳಿಗೆಯನ್ನು ಓದು-ಬರಹದತ್ತ ಆಕರ್ಷಿಸಲು ಅನುಕೂಲವಾಗಲಿದೆ ಎಂದರು.
ಸರಕಾರದ ಧೋರಣೆಯಿಂದ ಕನ್ನಡ ಶಾಲೆಗೆ ತೊಂದರೆ
ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಕನ್ನಡ ಶಾಲಾ ಉಳಿಸುವಲ್ಲಿ ಸರಕಾರ ಎಡವುತ್ತಿದೆ. ಸರಕಾರದ ಧೋರಣೆ ಹಲವು ಕನ್ನಡ ಶಾಲೆಗಳ ಅವನತಿಗೆ ಮುನ್ನುಡಿ ಬರೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸನ್ಮಾನ ಸಾಳ್ವೆಗೆ ಅರ್ಪಣೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಕೆ.ವಿಜಯ ಕುಮಾರ್, ಪಾಕಿಸ್ಥಾನದಿಂದ ಶಿಕ್ಷೆಗೊಳಪಟ್ಟ ಜಾಧವ್ ಅವರ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿ, ಜಾಧವ್ ಅವರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಭಾರತದ ಪ್ರತಿಷ್ಠೆ, ಗೌರವ ಎತ್ತಿಹಿಡಿದ ನ್ಯಾಯವಾದಿ ಸಾಳ್ವೆ ಅವರಿಗೆ ನನ್ನ ಸನ್ಮಾನವನ್ನು ಅರ್ಪಿಸುತ್ತೇನೆ ಎಂದರು.
ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅವನೀ ಉಪಾಧ್ಯ ಬರೆದ ಧಾರಿಣಿ ಚುಟುಕು ಸಂಕಲನವನ್ನು ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಡಾ.ಜೆ.ದಿನೇಶ್ಚಂದ್ರ ಹೆಗ್ಡೆ, ಜಿಪಂ ಸದಸ್ಯ ಸುಮಿತ್ ಶೆಟ್ಟಿ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಮಾತನಾಡಿದರು.
ತಾಲೂಕು ಪರಿಷತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಉದ್ಯಮಿ ಜಿ. ಸುಧೀರ್ ಹೆಗ್ಡೆ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಸಮ್ಮೇಳನ ಮಾಜಿ ಅಧ್ಯಕ್ಷ ಬೇಲಾಡಿ ವಿಠಲ ಶೆಟ್ಟಿ, ತಾಪಂ ಅಧ್ಯಕ್ಷೆ ಸೌಭಾಗ್ಯಾ ಮಡಿವಾಳ, ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್ ವಾಗ್ಲೆ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಒ ಮೇ. ಡಾ.ಹರ್ಷ ಕೆ.ಬಿ., ತಾಪಂ ಸದಸ್ಯೆ ನಿರ್ಮಲಾ ರಾಣೆ, ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಪ್ರಾಂಶುಪಾಲ ಗುರುಮೂರ್ತಿ ಎನ್.ಟಿ., ಉಪಪ್ರಾಂಶುಪಾಲ ನಾಗರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾವಿದ ಗಣೇಶ್ ಗಂಗೊಳ್ಳಿ ತಂಡ ಪ್ರಾರ್ಥಿಸಿದರು. ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಕೆ. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಾಂತಿನಾಥ ಜೋಗಿ ವಂದಿಸಿದರು.
ವೈಭವದ ಮೆರವಣಿಗೆ
ಬೈಲೂರು ಮಾರಿಯಮ್ಮ ದೇಗುಲದ ಆವರಣದಿಂದ ಮೆರವಣಿಗೆ ಮೂಲಕ ಸಮ್ಮೇಳನಾಧ್ಯಕ್ಷರನ್ನು ಸಭಾಂಗಣಕ್ಕೆ ಕರೆತರಲಾಯಿತು. ಮೆರವಣಿಗೆಗೆ ಉದ್ಯಮಿ ಜೆ. ಸುಧೀರ್ ಹೆಗ್ಡೆ ಚಾಲನೆ ನೀಡಿದರು. ಮಹಿಳೆಯರ ಚೆಂಡೆ ವಾದನ, ಕಂಬಳ ಕೋಣ, ವೀರಗಾಸೆ ಮೆರವಣಿಗೆಗೆ ಮೆರುಗು ನೀಡಿತು.