‘ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ ಯೋಜನೆಗೆ ಉಡುಪಿಯಲ್ಲಿ ಚಾಲನೆ
ನಾಲ್ಕೂರು, ಕುಡುಬಿ, ಸ್ಕೂಲ್-
ಉಡುಪಿ, ಜ.30: ರಾಜ್ಯ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ‘ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ ಯೋಜನೆಯನ್ನು ಮುಂದಿನ ತಿಂಗಳು ರಾಜ್ಯಾದ್ಯಂತ ಅನುಷ್ಠಾನಗೊಳಿಸುವ ಪೂರ್ವಭಾವಿಯಾಗಿ ಇಂದು ಉಡುಪಿ ಜಿಲ್ಲೆಯಲ್ಲಿ ಅದನ್ನು ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಶನಿವಾರ ದಿನವಿಡಿ ವಿವಿಧ ಕಾರ್ಯಕ್ರಮಗಳ ಮೂಲಕ ಅದಕ್ಕೆ ಚಾಲನೆ ನೀಡಿದರು.
ಉಡುಪಿಯಲ್ಲಿ ನಡೆದ ಕಾರ್ಯಕ್ರಮದ ಸಾಧಕ-ಬಾಧಕಗಳ ವರದಿಯ ಆಧಾರದಲ್ಲಿ ಮುಂದಿನ ತಿಂಗಳಿನಿಂದ ಇದನ್ನು ಪ್ರತಿ ಮೂರನೇ ಶನಿವಾರ ರಾಜ್ಯದಾದ್ಯಂತ ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದರು.
ಪ್ರಧಾನವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಕಂದಾಯ ಇಲಾಖೆಯ ನೂತನ ಕಾರ್ಯಕ್ರಮ ಇದಾಗಿದ್ದು, ಇಲ್ಲಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸಾಧ್ಯವಿದ್ದರೆ ಸ್ಥಳದಲ್ಲೇ ಪರಿಹಾರ ನೀಡಿ, ಇಲ್ಲದಿದ್ದರೆ ಸಮಯ ಮಿತಿಯೊಳಗೆ ಅವುಗಳಿಗೆ ಪರಿಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದವರು ವಿವರಿಸಿದರು.
ಜಿಲ್ಲಾಧಿಕಾರಿಗಳೊಂದಿಗೆ, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಾಲೂಕಿನ ತಹಶೀಲ್ದಾರರು ಗ್ರಾಮಕ್ಕೆ ಭೇಟಿ ನೀಡಿದ್ದು, ಇವರ ಮೂಲಕ ಜನರ ಬಹುಕಾಲದ ದೂರು, ಸಮಸ್ಯೆಗಳಿಗೆ ಸಂಬಂಧಿಸಿ ಪರಿಹಾರ ಕೋರಿ ನೀಡಿದ ಅರ್ಜಿಗಳ ವಿಚಾರಣೆ ನಡೆದು, ಕೆಲವಕ್ಕೆ ಸ್ಥಳದಲ್ಲೇ ಪರಿಹಾರ ನೀಡಲಾಯಿ ತಲ್ಲದೇ ಇನ್ನುಳಿದವುಗಳಿಗೆ ಸ್ಪಷ್ಟ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದ ಮೂಲಕ ಗ್ರಾಮದ ಸಮಸ್ಯೆಗಳನ್ನು ಅರಿಯಲು, ಊರಿನ ಜನರೊಂದಿಗೆ ಬೆರೆತು ಅವರ ಸಮಸ್ಯೆ ಅರಿಯಲು ಸಾಧ್ಯವಾಗಲಿದೆ. ಕಾರ್ಯಕ್ರಮದಲ್ಲಿ ಜನರ ಅರ್ಜಿಗಳ ವಿಚಾರಣೆ ನಡೆಯುವುದು ಮಾತ್ರವಲ್ಲದೇ, ಊರಿನ ಶಾಲೆ, ವಿವಿಧ ಕಚೇರಿ, ಅಂಗನವಾಡಿ, ವಿವಿಧ ವರ್ಗಗಳ ಕಾಲನಿ ಗಳಿಗೆ ಭೇಟಿ ನೀಡಲಾಗುತ್ತದೆ. ಅಲ್ಲದೇ ಗ್ರಾಮದಲ್ಲಿ ನಡೆಯುವ ಕಾಮಗಾರಿಗಳ ಪರಿಶೀಲನೆ, ಊರಿನ ಸಶ್ಮಾನಕ್ಕೆ ಭೇಟಿ ನೀಡಿ ಪರಿಶೀಲನೆ, ಇಲ್ಲದಿದ್ದರೆ ಅದರ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗು ತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾರ್ಯಕ್ರಮದ ಭಾಗವಾಗಿ ಮೊದಲು ನಾಲ್ಕೂರು ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಶಾಲೆಯ ಮಕ್ಕಳ ಜೊತೆ ಸಂವಾದ ನಡೆಸಿದರು. ಶಾಲೆಯಲ್ಲಿ ಹಣ್ಣಿನ ಗಿಡ ನೆಟ್ಟು ಪರಿಸರ ರಕ್ಷಣೆಯ ಅಗತ್ಯತೆಯನ್ನು ತಿಳಿ ಹೇಳಿದರು. ಎಸೆಸೆಲ್ಸಿ ಪರೀಕ್ಷೆ ಎದುರಿಸುವ ಮಕ್ಕಳಿಗೆ ಧೈರ್ಯ ತುಂಬಿ, ಭವಿಷ್ಯದ ಬಗ್ಗೆ ಕನಸು ಕಟ್ಟಲು ಸ್ಪೂರ್ತಿ ತುಂಬಿದರು.
ಬಳಿಕ ನಾಲ್ಕೂರು ಗ್ರಾಮ ಪಂಚಾಯತ್‌ನ ಸಮುದಾಯ ಭವನದಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮೊದಲು ಸ್ವೀಕರಿಸಿದ 57 ಅರ್ಜಿಗಳು ಹಾಗೂ ಇಂದು ಸ್ವೀಕರಿಸಿದ ಅರ್ಜಿಗಳೊಂದಿಗೆ ಗ್ರಾಮಸ್ಥರ ಒಟ್ಟು 147 ಅರ್ಜಿಗಳ ವಿಚಾರಣೆ ನಡೆಸಿದರು. ಮಹಿಳೆಯರು, ಯುವಕ-ಯುವತಿಯರು ಸೇರಿದಂತೆ ಗ್ರಾಮದ ನೂರಾರು ಮಂದಿ ಅಲ್ಲಿ ಸೇರಿ ತಮ್ಮ ಹಾಗೂ ಗ್ರಾಮದ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡರು.
ಮಧ್ಯಾಹ್ನದ ಬಳಿಕ ಕಜ್ಕೆಯಲ್ಲಿರುವ ಕುಡುಬಿ ಜನಾಂಗದ ಕಾಲನಿಗೆ ಭೇಟಿ ನೀಡಿ ಗುಂಪು ಚರ್ಚೆ ನಡೆಸಿದರಲ್ಲದೇ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವ ಅದಕ್ಕೆ ಪರಿಹಾರ ನೀಡುವ ಪ್ರಯತ್ನ ನಡೆಸಿದರು. ಬಳಿಕ ಮಾರಾಳಿ ದಲಿತ ಕಾಲನಿಗೆ ಭೇಟಿ ನೀಡಿ ಅಲ್ಲೂ ಜನರ ಸಮಸ್ಯೆ ಆಲಿಸಿದರು. ಹೆಸ್ಕುಂದದ ಬೊಂಬೈ ನಾಯ್ಕರ ಮನೆ ಆವರಣದಲ್ಲಿ ಪರಿಸರದ ಜನರ ಸಮಸ್ಯೆ ಆಲಿಸಿದರೆ, ನಾಲ್ಕೂರಿನ ಸ್ಮಶಾನಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ಅರಿತು ಕೊಂಡರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ, ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ, ಬ್ರಹ್ಮಾವರ ಆರ್‌ಐ ಲಕ್ಷ್ಮೀನಾರಾಯಣ ಭಟ್, ಕೋಟ ಆರ್‌ಐ ರಾಜು, ಗ್ರಾಮ ಕರಣಿಕರಾದ ಚೆಲುವರಾಜ್, ರಾಜಾ ಸಾಬ್, ಶಿವರಾಜ ಕಟ್ಟಗಿ, ರಾಘವೇಂದ್ರ ಉಪಸ್ಥಿತರಿದ್ದರು.