ಸಹಕಾರಿ ಸಂಘಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅಗತ್ಯ: ಹೆಚ್ಚುವರಿ ಎಸ್ಪಿ ಕುಮಾರಚಂದ್ರ
ಉಡುಪಿ, ಜ.30: ಸಹಕಾರ ಸಂಘಗಳಲ್ಲಿ ಸಾರ್ವಜನಿಕರು, ಮಧ್ಯಮವರ್ಗದವರು ಹಣಕಾಸಿನ ವ್ಯವಹಾರ ನಡೆಸುತ್ತಿರು ವುದರಿಂದ ಅವರ ವೌಲ್ಯಯುತ ವಸ್ತುಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಆದುದರಿಂದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಿಸಿಟಿವಿ, ಗುಣಮಟ್ಟದ ಲಾಕರ್, ಅಲರಾಂ ಸಂಸ್ಥೆಯಲ್ಲಿ ಅಳವಡಿಸಬೇಕು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಕೃಷಿ ಪತ್ತಿನ/ಪತ್ತಿನ ಹಾಗೂ ಇತರೆ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ವರಿಗೆ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಸಹಕಾರ ಸಂಘಗಳಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಆದಾಯ ತೆರಿಗೆ ಕುರಿತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಿಸಿಟಿವಿಯ ಡಿವಿಆರ್ ಸುರಕ್ಷಿತಾ ಸ್ಥಳದಲ್ಲಿ ಇಟ್ಟು ದಾಖಲಾತಿ ಅಳಿಸಿ ಹೋಗದಂತೆ ಎಚ್ಚರ ವಹಿಸಬೇಕು. ಪ್ರವೇಶ ದ್ವಾರದಲ್ಲೇ ಜನರ ಮುಖ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಪ್ರತಿ ಬಾರಿಯೂ ನಿರ್ವಹಣೆ ಮಾಡಿ ಅಪರಾಧ ನಡೆದಾಗ ಆರೋಪಿಗಳ ಪತ್ತೆಗೆ ಸಹಕಾರವಾಗುವಂತೆ ನೋಡಿಕೊಳ್ಳಬೇಕು. ಭದ್ರತಾ ಸಿಬ್ಬಂದಿ ನಿಯೋಜನೆಯ ಜತೆಗೆ ಗ್ರಾಹಕರ ಸೋಗಿನಲ್ಲಿ ಬಂದು ಕುಳಿತುಕೊಳ್ಳುವವರ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದರು.
ಕೃಷಿಕರು ಸಹಿತ ಇತರೆ ಎಲ್ಲಾ ವರ್ಗದ ಜನಸಾಮಾನ್ಯರೊಂದಿಗೆ ಜನಸ್ನೇಹಿಯಾಗಿ ವ್ಯವಹಾರಿಸುವ ಸಹಕಾರಿ ಸಂಸ್ಥೆಗಳು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಕೃಷಿ ಸಾಲದೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಜತೆಗೆ ಜನಸಾಮಾನ್ಯರಿಗೆ ಸಹಕಾರಿ ಸಂಸ್ಥೆ ಹತ್ತಿರವಾಗಿವೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಿ ದ್ದರು. ಸಹಕಾರ ಸಂಘಗಳ ಉಪನಿಬಂಧಕ (ಪ್ರಭಾರ) ಪ್ರವೀಣ್ ಬಿ.ನಾಯಕ್, ತೆರಿಗೆ ಸಲಹೆಗಾರ ಎಂ.ಗೋಪಿಕೃಷ್ಣ ರಾವ್, ಆಡಳಿತ ಮಂಡಳಿ ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಅಲೆವೂರು ಹರೀಶ್ ಕಿಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಪ್ರಭಾರ) ಪುರುಷೋತ್ತಮ್ ಎಸ್.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.