×
Ad

ಸಿಂಘು ಬಾರ್ಡರ್‌ ನಲ್ಲಿ ʼಸ್ಥಳೀಯರುʼ ಎಂದು ರೈತರ ಮೇಲೆ ಹಲ್ಲೆಗೈದವರು ʼಬಿಜೆಪಿ ಕಾರ್ಯಕರ್ತರು!ʼ

Update: 2021-01-30 19:56 IST

ಹೊಸದಿಲ್ಲಿ,ಜ.30: ಶುಕ್ರವಾರದಂದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಿಂಘು ಬಾರ್ಡರ್‌ ನಲ್ಲಿ ʼಸ್ಥಳೀಯರುʼ ಎಂಬ ಹೆಸರಿನಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿಯಿದ್ದ ಗುಂಪೊಂದು ದಾಂಧಲೆಗೈದು, ಟೆಂಟ್‌ ಗಳನ್ನು ಧ್ವಂಸ ಮಾಡಿದ್ದ ಘಟನೆಯು ನಡೆದಿತ್ತು. ಪ್ರತಿಭಟನಕಾರರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಕೃತ್ಯವೆಸಗಿದ್ದರು ಎನ್ನಲಾಗಿದೆ. ಹಲವಾರು ಸತ್ಯಶೋಧನಾ ವರದಿಗಳು ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿಲ್ಲ ಎಂದು ಸಾಬೀತುಪಡಿಸಿದರೂ ಕೂಡಾ ಕಲ್ಲುತೂರಾಟ ಮತ್ತು ದಾಂಧಲೆ ನಡೆಸಿದವರಿಗೆ ಈ ಕುರಿತ ಅರಿವೇ ಇರಲಿಲ್ಲ ಎಂದು ALTNEWS.IN ವರದಿ ಮಾಡಿದೆ.

ಝೀನ್ಯೂಸ್‌, ಟೈಮ್ಸ್‌ ನೌ, ಎಎನ್‌ʼಐ ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳು ಗಲಭೆಕೋರರನ್ನು ʼಲೋಕಲ್ಸ್‌ (ಸ್ಥಳಿಯರು)ʼ ಎಂದೇ ಬಿಂಬಿಸಿತ್ತು ಎನ್ನಲಾಗಿದೆ. 

ಗಲಭೆಕೋರರ ಗುಂಪಿನಲ್ಲಿ ಸಕ್ರಿಯನಾಗಿದ್ದ ಬಿಳಿ-ನೀಲಿ-ಹಸಿರು ಗೆರೆಗಳ ವಸ್ತ್ರ ಧರಿಸಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿಯನ್ನು ಬಿಜೆಪಿಯ ಸಕ್ರಿಯ ಕಾರ್ಯಕರ್ತ ʼಅಮನ್‌ ದಬಾಸ್‌ʼ ಎಂದು ಗುರುತಿಸಲಾಗಿದೆ.

ಅಮನ್‌ ದಬಾಸ್‌ ಯಾರು?

ಈತ ತನ್ನ ಹೆಸರಿನೊಂದಿಗೆ ಸಮಾಜ ಸೇವಕ ಎಂದು ಸೇರಿಸಿಕೊಂಡಿದ್ದು, ಫೇಸ್‌ ಬುಕ್‌ ನಲ್ಲಿ ಈತನ ಖಾತೆಯ ಹೆಸರು ʼಅಮನ್‌ ಕುಮಾರ್‌ ಸೋಶಿಯಲ್‌ ವರ್ಕರ್‌ʼ ಎಂದು ಇದೆ. ದಬಾಸ್‌ ಅನ್ನುವುದು ಜಾಟ್‌ ಸಮುದಾಯಕ್ಕೆ ಸೇರಿದ ಹೆಸರಾಗಿದೆ. ಕಳೆದ ವರ್ಷ ನಾರ್ತ್‌ ವೆಸ್ಟ್‌ ದಿಲ್ಲಿಯ ಬರ್ವಾಲಾ ಗ್ರಾಮದಲ್ಲಿ ಮನೆಗಳಿಗೆ ಸ್ಯಾನಿಟೈಸ್‌ ಮಾಡುವ ಚಿತ್ರವನ್ನು ಈತ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದ ಎನ್ನಲಾಗಿದೆ.

ಅಮನ್‌ ದಬಾಸ್‌ ಸ್ಥಳೀಯ ಬಿಜೆಪಿ ನಾಯಕಿ ಹಾಗೂ ಮುನ್ಸಿಪಲ್‌ ಕೌನ್ಸಿಲರ್‌ ಅಂಜು ಕುಮಾರ್‌ ಎಂಬಾಕೆಯನ್ನು ವಿವಾಹವಾಗಿದ್ದ. ಬಿಜೆಪಿ ಪಕ್ಷದ ಹಲವಾರು ಸಭೆಗಳಲ್ಲೂ ಈತ ಕಾಣಿಸಿಕೊಳ್ಳುತ್ತಿದ್ದ. ಇತ್ತೀಚೆಗೆ ಗೃಹಸಚಿವ ಅಮಿತ್‌ ಶಾ ಜೊತೆಗಿರುವ ಫೋಟೊವನ್ನೂ ಈತ ಹಂಚಿಕೊಂಡಿದ್ದ ಎನ್ನಲಾಗಿದೆ.

ಗಲಭೆಕೋರರ ಗುಂಪಿನಲ್ಲಿ ಇನ್ನೋರ್ವ ಬಿಜೆಪಿ ಕಾರ್ಯಕರ್ತ:

ಅಮನ್‌ ದಬಾಸ್‌ ನೊಂದಿಗೆ ಕಾಣಿಸಿಕೊಂಡಿದ್ದ ಇನ್ನೋರ್ವ ವ್ಯಕ್ತಿ ಕ್ರಿಷನ್‌ ದಬಾಸ್‌ ಎಂಬಾತ ತಾನು ಸಿಂಘು ಬಾರ್ಡರ್‌ ನಲ್ಲಿ ಇರುವುದಾಗಿ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಹಾಕಿದ್ದ. ಆತ ತನ್ನ ಪೋಸ್ಟ್‌ ಡಿಲೀಟ್‌ ಮಾಡುವ ಮುಂಚೆಯೇ ಆಲ್ಟ್‌ ನ್ಯೂಸ್‌ ಅದರ ಸ್ಕ್ರೀನ್‌ ಶಾಟ್‌ ಗಳನ್ನು ಶೇಖರಿಸಿತ್ತು ಎನ್ನಲಾಗಿದೆ. ಈ ಪೋಸ್ಟ್‌ ನಲ್ಲಿ ಆತ ಬಿಜೆಪಿ ನಾಯಕರಾದ ಸಂದೀಪ್‌ ಶೆರಾವತ್‌ ಹಾಗೂ ರವೀಂದರ್‌ ಕುಮಾರ್‌ ರನ್ನು ಟ್ಯಾಗ್‌ ಮಾಡಿದ್ದಾನೆ.

"ನಮ್ಮ ಬಾರ್ಡರ್‌ ಅನ್ನು ಖಾಲಿ ಮಾಡಿ" ಎಂದು ಕ್ರಿಷನ್‌ ಘೋಷಣೆ ಕೂಗುವ ವೀಡಿಯೋ ಟಿವಿಯಲ್ಲೂ ಪ್ರಕಟವಾಗಿತ್ತು. ಅಲ್ಲೂ ಆತನನ್ನು ಲೋಕಲ್‌ ಎಂದೇ ಸಂಬೋಧಿಸಲಾಗಿತ್ತು. ಆತನ ಜೊತೆಗೆ ಅಮನ್‌ ಕೂಡಾ ಮುಂಚೂಣಿಯಲ್ಲಿದ್ದದ್ದು ವೀಡಿಯೋದಲ್ಲಿ ಸ್ಪಷ್ಟವಾಗಿದೆ.

ಇದರೊಂದಿಗೆ ಅಮನ್‌ ದಬಾಸ್‌ ಹಾಗೂ ಕ್ರಿಷನ್‌ ದಬಾಸ್‌ ಇಬ್ಬರೂ ಇತ್ತೀಚೆಗೆ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರಕಾರದ ವಿರುದ್ಧ ʼಭಾರತೀಯ ಜನತಾ ಪಕ್ಷದʼ ಬ್ಯಾನರ್‌ ನಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಫೋಟೊ ಕೂಡ ಸಾಮಾಜಿಕ ತಾಣದಲ್ಲಿ ಪತ್ತೆಯಾಗಿದೆ.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News