ಪುತ್ತೂರು : ಬೆಂಕಿ ಅವಘಡ ; ಮನೆ ಭಸ್ಮ
ಪುತ್ತೂರು: ಜ 30 ಪುತ್ತೂರು ಮಹಾಲಿಂಗೇಶ್ವರ ದೇವಾಸ್ಥಾನದ ದೇವಮಾರು ಗದ್ದೆಯ ಸಮೀಪದಲ್ಲಿ ಮನೆಯೊಂದಕ್ಕೆ ಬೆಂಕಿ ಹತ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ದೇವಸ್ಥಾನದ ಗದ್ದೆಯಲ್ಲಿ ಶಿವನ ಮೂರ್ತಿ ಸ್ಥಾಪಿಸಲಾಗಿರುವ ಸ್ಥಳದ ಸಮೀಪ ದಿಂದ ಸ್ಮಶಾನಕ್ಕೆ ಹೋಗುವ ದಾರಿಯ ಸಮೀಪ ಈ ಮನೆಯಿದ್ದು ಇಂದು ಮದ್ಯಾಹ್ನದ ವೇಳೆ ಘಟನೆ ಸಂಭವಿಸಿದೆ.
ಪ್ಲಾಸ್ಟಿಕ್ ಬಕೆಟ್ ಹಾಗೂ ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಗದಗ ಮೂಲದ ವ್ಯಕ್ತಿಗಳು ಈ ಸುಟ್ಟು ಹೋದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ನಿಖರ ಮಾಹಿತಿ ತನಿಖೆಯಿಂದ ಹೊರ ಬರಬೇಕಿದೆ.
ಬೆಂಕಿ ಅವಘಡ ಸಂಭವಿಸುವ ವೇಳೆ ಬಾಡಿಗೆಗೆ ಇದ್ದ ಕುಟುಂಬ ಮನೆಯೊಳಗಡೆ ಇದ್ದರು, ಮನೆಗೆ ಬೆಂಕಿ ಹಿಡಿದಿರುವುದು ಗೊತ್ತಾಗುತ್ತಲೇ ಅವರೆಲ್ಲಾ ಮನೆಯ ಒಳಗಡೆಯಿಂದ ಹೊರಗೆ ಓಡಿ ಬಂದಿದ್ದರು. ಹೀಗಾಗಿ ಯಾವುದೇ ಜೀವಾಪಾಯ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. ಮನೆಯೊಳಗಡೆ ಸ್ಟಾಕ್ ನಲ್ಲಿರಿಸಿದ್ದ ಪ್ಲಾಸ್ಟಿಕ್ ಉತ್ಪನ್ನಗಳು ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಪುತ್ತೂರು ಅಗ್ನಿ ಶಾಮಕದಳದ ಎರಡು ವಾಹನಗಳು ದೌಡಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು . ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರಿನ ಮುಖ್ಯರಸ್ತೆಯ ಫ್ಯಾನ್ಸಿ ಕಾಟೇಜ್ ನವರ ಮನೆಯನ್ನು ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಬಾಡಿಗೆ ನೀಡಿದ್ದರು ಎಂದು ತಿಳಿದು ಬಂದಿದೆ.