×
Ad

ಕೋವಿಡ್-19:ಇನ್ನೊಂದು ಲಸಿಕೆಯ ಟ್ರಯಲ್‌ಗೆ ಅನುಮತಿ ಕೋರಿ ಸೀರಮ್‌ನಿಂದ ಕೇಂದ್ರಕ್ಕೆ ಅರ್ಜಿ

Update: 2021-01-30 21:11 IST

 ಪುಣೆ,ಜ.30: ಅಮೆರಿಕದ ನೊವೊವ್ಯಾಕ್ಸ್ ಕಂಪನಿಯು ಅಭಿವೃದ್ಧಿಗೊಳಿಸಿರುವ ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಟ್ರಯಲ್‌ಗೊಳಪಡಿಸಲು ಅನುಮತಿ ಕೋರಿ ಸೀರಮ್‌ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಭಾರತೀಯ ಔಷಧಿಗಳ ಮಹಾ ನಿಯಂತ್ರಕ (ಡಿಸಿಜಿಐ)ರಿಗೆ ಶುಕ್ರವಾರ ಅರ್ಜಿಯನ್ನು ಸಲ್ಲಿಸಿದ್ದು, ಸೀರಮ್ ನೂತನ ಲಸಿಕೆಯನ್ನು ಈ ವರ್ಷದ ಜೂನ್ ವೇಳೆಗೆ ಬಿಡುಗಡೆಗೊಳಿಸುವ ನಿರೀಕ್ಷೆಯನ್ನಿಟ್ಟುಕೊಂಡಿದೆ ಎಂದು ಕಂಪನಿಯ ಸಿಇಒ  ಆದಾರ್ ಪೂನಾವಾಲಾ ಅವರು ಶನಿವಾರ ತಿಳಿಸಿದ್ದಾರೆ. ನೊವೊವ್ಯಾಕ್ಸ್ ಲಸಿಕೆಯನ್ನು ಸ್ಥಳೀಯ ಬ್ರಾಂಡ್ ‘ಕೊವೊವ್ಯಾಕ್ಸ್ ’ ಅಡಿಯಲ್ಲಿ ಬಿಡುಗಡೆಗೊಳಿಸಲಾಗುವುದು. ನೊವೊವ್ಯಾಕ್ಸ್ ಮತ್ತು ಸೀರಮ್‌ ಸಹಭಾಗಿತ್ವದಲ್ಲಿ ನಡೆಸಲಾದ ಟ್ರಯಲ್‌ಗಳಲ್ಲಿ ನೂತನ ಲಸಿಕೆಯು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಪೂನಾವಾಲಾ ಟ್ವೀಟಿಸಿದ್ದಾರೆ.

ವಿಶ್ವದಲ್ಲಿ ಅತ್ಯಂತ ದೊಡ್ಡ ಲಸಿಕೆ ತಯಾರಿಕೆ ಸಂಸ್ಥೆಯಾಗಿರುವ ಪುಣೆಯ ಎಸ್‌ಐಐ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೊವೊವ್ಯಾಕ್ಸ್‌ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದ್ದು,ಡಿಸಿಜಿಐ ಅನುಮತಿ ನೀಡಿದ ಬಳಿಕ ಭಾರತದಲ್ಲಿ ಲಸಿಕೆಯ ಬ್ರಿಡ್ಜಿಂಗ್ ಟ್ರಯಲ್ ನಡೆಸಲಾಗುವುದು ಎಂದು ಅವರು ತಿಳಿಸಿದರು. ಬ್ರಿಡ್ಜಿಂಗ್ ಟ್ರಯಲ್ ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ಡೋಸ್ ಪ್ರಮಾಣ ಕುರಿತು ಹೆಚ್ಚಿನ ಕ್ಲಿನಿಕಲ್ ಮಾಹಿತಿಗಳನ್ನು ಪಡೆಯಲು ಹೊಸ ಪ್ರದೇಶ ಅಥವಾ ದೇಶದಲ್ಲಿ ನಡೆಸಲಾಗುವ ಪೂರಕ ಟ್ರಯಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News