ಫೆ. 19 ರಿಂದ ಕಾಜೂರು ಉರೂಸ್

Update: 2021-01-30 16:03 GMT

ಬೆಳ್ತಂಗಡಿ : ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನಲ್ಲಿ ಪ್ರತೀವರ್ಷ ನಡೆಯುವ ಉರೂಸ್ ಕಾರ್ಯಕ್ರಮ ಫೆ.19 ರಿಂದ ಆರಂಭಗೊಂಡು ಫೆ. 28 ರ ವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷ  ಕೆ.ಯು ಇಬ್ರಾಹಿಂ ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.

ಸಮಿತಿಯ ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ರವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಲಿದ್ದಾರೆ.

ಫೆ. 19 ರಂದು ಉರೂಸ್ ಸಮಾರಂಭದ ಉದ್ಘಾಟನೆಯನ್ನು ತಾ. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಿ ದುಆ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಅನೇಕ ಸಯ್ಯಿದರುಗಳು, ಕಾವಳಕಟ್ಟೆ ಹಝ್ರತ್, ಹಾಗೂ ತಾಲೂಕಿನ ಮಸ್ಜಿದ್‌ಗಳ ಅಧ್ಯಕ್ಷರುಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ಧ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಫೆ. 19 ರಂದು ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ.

ಫೆ. 25ರಂದು ಬೃಹತ್ ದಿಕ್ರ್ ಮಜ್ಲಿಸ್‌ಗೆ ಸುಲ್ತಾನುಲ್ ಉಲಮಾ

ಫೆ. 25 ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ ಬೃಹತ್ ದಿಕ್ರ್ ಮಜ್ಲಿಸ್ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಖಾಝಿ ಮಾಣಿ ಉಸ್ತಾದ್ ಸಹಿತ ಹಲವಾರು ವಿದ್ವಾಂಸರುಗಳು, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ ಸಹಿತ ಅನೇಕ ಸಯ್ಯಿದರುಗಳು, ಉಲಮಾಗಳು, ಸಾಮಾಜಿಕ ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ.

ಫೆ. 28 ರಂದು ಸಂಜೆ ಉರೂಸ್ ಸಮಾರೋಪ ದಿನದಂದು ಸರ್ವಧರ್ಮೀಯರ ಸೌಹಾರ್ದ ಸಮಾರಂಭ ನಡೆಯಲಿದ್ದು, ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಮ್ ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುಲ್ ರಶೀದ್ ಝೈನಿ ಸಖಾಫಿ ಅಲ್ಲದೆ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು ಹಾಗೂ, ಕೇಂದ್ರದ, ರಾಜ್ಯದ ಸಚಿವರುಗಳು, ಸಂಸದರು, ಶಾಸಕರುಗಳು ಭಾಗವಹಿಸಲಿದ್ದಾರೆ.

ರಾತ್ರಿ ಉರೂಸ್ ಸಮಾರೋಪದಲ್ಲಿ ವಿಶ್ವವಿಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣಗೈಯ್ಯಲಿ ದ್ದಾರೆ. ಮರ್‌ಹೂಮ್ ಕಾಜೂರು ತಂಙಳ್ ಸಹೋದರ ಸಯ್ಯಿದಲವಿ ಕೋಯ ಜಮಲುಲ್ಲೈಲಿ ತಂಙಳ್ ಕೇರಳ ಭಾಗಿಯಾಗಲಿ ದ್ದಾರೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಬೆಲ್ಲದಗಂಜಿ ವಿತರಣೆ, ಉರೂಸ್ ಕೊನೆಯದಾಗಿ ಸಾರ್ವಜನಿಕರಿಗೆ  ಅನ್ನದಾನ ನಡೆಯಲಿದೆ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಎಂ ಅಬೂಬಕ್ಕರ್ ಮಲ್ಲಿಗೆಮನೆ, ಉಪಾಧ್ಯಕ್ಷರು ಕಿಲ್ಲೂರು ಆಡಳಿತ ಸಮಿತಿ, ಜೆ.ಎಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಪ್ರ. ಕಾರ್ಯದರ್ಶಿ ಉರೂಸ್ ಸಮಿತಿ, ಎಂ.ಎ ಕಾಸಿಂ ಮಲ್ಲಿಗೆಮನೆ ಕಿಲ್ಲೂರು, ಜೊತೆ ಕಾರ್ಯದರ್ಶಿ ಉರೂಸ್ ಸಮಿತಿ,  ಕೆ.ಯು ಮುಹಮ್ಮದ್ ಕಮಾಲ್ ಕಾಜೂರು, ಕೋಶಾಧಿಕಾರಿ ಉರೂಸ್ ಸಮಿತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News