ಕಾಮಗಾರಿ ಪರಿಶೀಲನೆಗೆ ಅಡ್ಡಿ ಚುನಾಯಿತ ಪ್ರತಿನಿಧಿಗಳಿಗೆ ಮಾಡಿರುವ ಅಗೌರವ : ರಮಾನಾಥ ರೈ

Update: 2021-01-30 16:31 GMT

ಬಂಟ್ವಾಳ, ಜ.31: ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕದ ಕಾಮಗಾರಿ ಪರಿಶೀಲನೆಗೆ ಆಗಮಿಸಿದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ನಿಯೋಗಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವುದು ಚುನಾವಣಾ ಪ್ರತಿನಿಧಿಗಳಿಗೆ ಮಾಡಿರುವ ಅಗೌರವವಾಗಿದ್ದು ಇದು ಖಂಡನೀಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. 

ಘಟಕದ ಪರಿಶೀಲನೆಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ನಡೆಯನ್ನು ಖಂಡಿಸಿ ಘಟಕದ ಎದುರು ಧರಣಿ ನಡೆಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿದ್ದ ಅವಧಿಯಲ್ಲಿ ಬಂಟ್ವಾಳ ತಾಲೂಕಿಗೆ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿದ್ದು ಆ ಪೈಕಿ ನಾಲ್ಕು ಉದ್ಘಾಟನೆಗೊಂಡಿದೆ. ಅವುಗಳ ಉದ್ಘಾಟನೆಗೆ ಮೊದಲು ಕಾಮಗಾರಿ ಪರಿಶೀಲನೆ ನಡೆಸಿದಂತೆ ಸರಪಾಡಿಯ ಈ ಯೋಜನೆಯ ಕಾಮಗಾರಿಯ ಪರಿಶೀಲನೆಗೆ ಆಗಮಿಸಿದಾಗ ಈ ಗ್ರಾಮದವರಲ್ಲದ ಕೆಲವು ಹೊರಗಿನವರು ಬಂದು ಅಡ್ಡಿಪಡಿಸಿದ್ದಾರೆ. ಇದು ಸರಿಯಾದ ನಡವಳಿಕೆ ಅಲ್ಲ ಎಂದರು.

ತಾಲೂಕಿನಲ್ಲಿ ನಡೆಯುವ ಯೋಜನೆಯೊಂದರ ಕಾಮಗಾರಿಯನ್ನು ತಾಲೂಕು ಪಂಚಾಯತ್ ಅಧ್ಯಕ್ಷರು ಪರಿಶೀಲನೆ ನಡೆಸ ಬಾರದು ಎನ್ನುವುದು ಯಾವ ನ್ಯಾಯ? ಇದು ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಅಗೌರವ. ಇದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.

ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಘಟಕದ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಅದಕ್ಕಾಗಿ ಪರಿಶೀಲನೆಗೆ ಅಡ್ಡಿಪಡಿಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ನಾವು ಎಂದೂ ರಾಜಕೀಯ ಮಾಡಿಲ್ಲ. ವಿರೋಧ ಮಾಡುತ್ತಿರುವುದು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News