ಬಿಜೆಪಿಯವರಿಂದ ಪ್ರಜಾಪ್ರಭುತ್ವ ಕಗ್ಗೊಲೆ: ಚಂದ್ರಹಾಸ ಕರ್ಕೇರ
ಬಂಟ್ವಾಳ : ಸರಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಘಟಕದ ಕಾಮಗಾರಿಯ ಪರಿಶೀಲನೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವುದು ಮತ್ತು ಬಿಜೆಪಿಯೊಂದಿಗೆ ಸೇರಿ ಅಧಿಕಾರಿಗಳು ಪರಿಶೀಲನೆಗೆ ಅವಕಾಶ ನಿರಾಕರಿಸಿರುವುದು ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಬೇಸರ ವ್ಯಕ್ತಪಡಿಸಿದರು.
ಪರಿಶೀಲನೆಗೆ ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ ಘಟಕದ ಎದುರು ಧರಣಿ ನಡೆಸಿದ ಸಂದರ್ಭದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ತಾಲೂಕು ಪಂಚಾಯತ್ ನಿಂದ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಘಟಕದ ಪರಿಶೀಲನೆಗೆ ಘಟಕದ ಇಂಜಿನಿಯರ್ ಸಹಿತ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ನಿನ್ನೆ ಒಪ್ಪಿಗೆ ಪಡೆದಿದ್ದು ಪರಿಶೀಲನೆ ಸಂದರ್ಭದಲ್ಲಿ ಬರುವಂತೆ ಅವರಿಗೂ ತಿಳಿಸಲಾಗಿತ್ತು. ಆದರೆ ಇಂದು ಅವಕಾಶ ನಿರಾಕರಿಸಿರು ವುದು ಖಂಡನೀಯವಾಗಿದೆ ಎಂದರು.
ಈ ಯೋಜನೆಯನ್ನು ಮಂಜೂರು ಮಾಡಿದ ಮಾಜಿ ಸಚಿವ ಬಿ.ರಮಾನಾಥ ಅವರನ್ನು ನಮ್ಮ ಜೊತೆಯಲ್ಲಿ ಕರೆದುಕೊಂಡು ಬಂದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಜಮಾಯಿಸಿ ನಮಗೆ ಧಿಕ್ಕಾರ ಕೂಗಿದ್ದಾರೆ. ಇದು ಅವರ ತಪ್ಪು ವರ್ತನೆ ಎಂದು ಅವರು ಹೇಳಿದರು.
ನಿಯಮದಂತೆ ತಾಲೂಕು ಪಂಚಾಯತ್ ಗೆ ಕಾಮಗಾರಿಯನ್ನು ಪರಿಶೀಲನೆ ಮಾಡುವ ಅವಕಾಶ ಇದೆ. ಈ ಹಿಂದೆಯೂ ತಾಲೂಕಿನ ಇತರ ನಾಲ್ಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಘಟಕವನ್ನು ಇದೇ ರೀತಿ ಪರಿಶೀಲನೆ ನಡೆಸಿದ್ದೇವೆ. ಇಲ್ಲಿ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಪರಿಶೀಲನೆಗೆ ಅಡ್ಡಿ ಪಡಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.
ಬಿಜೆಪಿಯವರ ಜೊತೆ ಅಧಿಕಾರಿಗಳೂ ಶಾಮಿಲಾಗಿ ಏಕಪಕ್ಷೀಯವಾಗಿ ವರ್ತಿಸಿರುವುದು ಕೂಡಾ ಖಂಡನೀಯವಾಗಿದೆ. ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.