×
Ad

ದ.ಕ. ಜಿಲ್ಲೆಯ ಪ್ರಥಮ 'ವೀರ - ವಿಕ್ರಮ' ಜೋಡುಕರೆ ಬಯಲು ಕಂಬಳಕ್ಕೆ ಸಂಭ್ರಮದ ಚಾಲನೆ

Update: 2021-01-30 22:26 IST

ಬಂಟ್ವಾಳ, ಜ.30: ತಾಲೂಕಿನ ಸಿದ್ದಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಇತಿಹಾಸ ಪ್ರಸಿದ್ದ 'ವೀರ -ವಿಕ್ರಮ'  ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು. 

ಈ ಬಾರಿ ದಕ್ಷಿಣ ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದ ಒಟ್ಟು ಹತ್ತು ಕಂಬಳ ಕೂಟಗಳ ಪೈಕಿ ಇದು ಪ್ರಥಮ ಕಂಬಳವಾಗಿದೆ. ಪ್ರಥಮ ಕಂಬಳದಲ್ಲಿ 176 ಜೋಡಿ ಕೋಣಗಳು ಭಾಗವಹಿಸಿದೆ ಎಂದು ತಿಳಿದು ಬಂದಿದೆ.  

ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದ ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳ ಇತಿಹಾಸ ಹೊಂದಿರುವ ಹೊಕ್ಕಾಡಿಗೋಳಿ ' ವೀರ-ವಿಕ್ರಮ' ಜೋಡುಕರೆ ಕಂಬಳಕ್ಕೆ ಧಾರ್ಮಿಕವಾಗಿ ವಿಶೇಷ ನಂಟು ಇದೆ ಎಂದರು. 

ಕಂಬಳ ಸಮಿತಿ ಅಧ್ಯಕ್ಷ ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ವೈದ್ಯ ಡಾ.ಸುದೀಪ್ ಕುಮಾರ್ ಜೈನ್ ಮಾತನಾಡಿ, ಕಂಬಳ ಕ್ರೀಡೆಯು ತುಳುನಾಡಿನ ಸಂಸ್ಕೃತಿ ಮೆರೆಯುತ್ತಿದೆ ಎಂದರು. 

ಎಪಿಎಂಸಿ ಮಾಜಿ ನಿರ್ದೇಶಕ ರತ್ನಕುಮಾರ್ ಚೌಟ, ಹೊಸಂಗಡಿ ತಾಪಂ ಸದಸ್ಯ ಓಬಯ, ಆರಂಬೋಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ ಹುಲಿಮೇರು, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ವಕೀಲ ಸುರೇಶ ಶೆಟ್ಟಿ, ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಕಿರಣ್ ಕುಮಾರ್ ಮಂಜಿಲ, ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಪುಷ್ಪರಾಜ ಜೈನ್, ಕೋಶಾಧಿಕಾರಿ ಎಚ್.ಹರೀಶ ಹಿಂಗಾಣಿ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂಚಾಲಕರಾದ ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ಧನ ಬಂಗೇರ ತಿಮರಡ್ಕ, ನಿತ್ಯಾನಂದ ಪೂಜಾರಿ ಕೆಂತಲೆ, ಸ್ಥಳದಾನಿಗಳಾದ ಸುಧೀರ್ ಶೆಟ್ಟಿ , ಸುಧಾಕರ ಚೌಟ ಬಾವ, ಗುಮ್ಮಣ್ಣ ಶೆಟ್ಟಿ, ಪ್ರವೀಣ ಕುಲಾಲ್, ಹರೀಶ ಶೆಟ್ಟಿ, ಸುಂದರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕಿನ ಎಲಿಯನಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಕಂಬಳಕ್ಕೆ ಸ್ಥಳೀಯ ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಮುಜಿಲ್ನಾಯ ದೈವಸ್ಥಾನದೊಂದಿಗೆ ವಿಶೇಷ ’ಧಾರ್ಮಿಕ ನಂಟು’ ಹೊಂದಿದೆ. ಎರಡೂ ಗ್ರಾಮಗಳ ಕೃಷಿಕರು ಮತ್ತು ಕಂಬಳಾಸಕ್ತರು ಶ್ರಮದಾನ ದಿಂದಲೇ ಕರೆ ದುರಸ್ತಿಗೊಳಿಸಿ ಸಜ್ಜುಗೊಳಿಸಿದ್ದಾರೆ.

ಸುಮಾರು 75 ವರ್ಷಕ್ಕೂ ಮಿಕ್ಕಿ ಇತಿಹಾಸ ಹೊಂದಿರುವ ಈ ಸಾಂಪ್ರದಾಯಿಕ ಕಂಬಳಕ್ಕೆ ಅಂದಿನ ಕೃಷಿಕರು ಏತ ನೀರಾವರಿ ಮೂಲಕ ಕಂಬಳ ಕರೆಗೆ ನೀರು ಹಾಯಿಸಿ ಗ್ಯಾಸ್ ಲೈಟ್ ಬೆಳಕಿನಲ್ಲಿ ’ಒಂಟಿ ಕರೆ’ ಕಂಬಳ ನಡೆಸುತ್ತಿದ್ದರು. ವಿಜೇತ ಕೋಣಗಳ ಮಾಲಕರಿಗೆ ಬಾಳೆಗೊನೆ, ಸೀಯಾಳ ಮತ್ತಿತರ ಕೃಷಿ ಉತ್ಪನ್ನಗಳನ್ನು ಬಹುಮಾನ ನೀಡುತ್ತಿದ್ದರು ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News