×
Ad

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ಬ್ಯಾಟರಿ ಚೂರು ಸಂಗ್ರಹಿಸಿದ ಪೊಲೀಸರು

Update: 2021-01-31 00:05 IST

ಹೊಸದಿಲ್ಲಿ, ಜ.30: ದಿಲ್ಲಿಯ ಇಸ್ರೇಲ್ ರಾಯಭಾರ ಕಚೇರಿಯ ಸನಿಹ ಶುಕ್ರವಾರ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಸ್ಫೋಟ ನಡೆದ ಸ್ಥಳದಿಂದ ದಿಲ್ಲಿ ಪೊಲೀಸರು ಶನಿವಾರ ಬ್ಯಾಟರಿ ಚೂರುಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಇದು ಟೈಮರ್ ಸಾಧನ ಬಳಸಿ ನಡೆಸಿದ ಸ್ಫೋಟವೆಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ರಾಯಭಾರ ಕಚೇರಿಯ ಬಳಿಯಿರುವ ಬಹುತೇಕ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದರೂ ಕೆಲವು ಸಿಸಿಟಿವಿ ತುಣುಕುಗಳನ್ನು ಸಂಗ್ರಹಿಸಿದ್ದು ಇದುವರೆಗೆ ಯಾವುದೇ ದೃಢ ಮಾಹಿತಿ ದೊರಕಿಲ್ಲ. ಒಂದು ಸಿಸಿಟಿವಿಯಲ್ಲಿ ದೊರೆತ ವೀಡಿಯೊದಲ್ಲಿ ಸ್ಫೋಟ ನಡೆದ ಕೆಲವೇ ಕ್ಷಣಗಳ ಮೊದಲು ಆ ರಸ್ತೆಯಲ್ಲಿ ವಾಹನವೊಂದು ಸಂಶಯಾಸ್ಪದ ರೀತಿಯಲ್ಲಿ ಸಂಚರಿಸಿದ್ದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟ ನಡೆದ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಭದ್ರತಾ ಪಡೆಯ ತಂಡವೊಂದು ಭೇಟಿ ನೀಡಿ ಪರಿಶೀಲಿಸಿದೆ. ಶುಕ್ರವಾರ ಜಿಂದಾಲ್ ಹೌಸ್‌ನ 50 ಮೀಟರ್ ದೂರದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಲಘು ಸ್ಫೋಫೋಟ ಸಂಭವಿಸಿತ್ತು.

ವಾಹನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಐಇಡಿ(ಸುಧಾರಿತ ಸ್ಫೋಟಕ ಸಾಧನ)ವನ್ನು ಹೂಕುಂಡದ ಬಳಿ ಎಸೆದಿದ್ದ ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಆದರೆ ಶನಿವಾರ ಬ್ಯಾಟರಿ ಚೂರು ಸಿಕ್ಕಿರುವುದರಿಂದ ಇದೊಂದು ಉತ್ತಮವಾಗಿ ಯೋಜಿಸಿದ ಷಡ್ಯಂತ್ರವಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಆವರಣದಲ್ಲಿ ಸಂಶಯಾಸ್ಪದ ವಸ್ತುವೊಂದು ಕಂಡು ಬಂದಿರುವ ಪ್ರಕರಣವನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಔರಂಗಾಜೇಬ್ ರಸ್ತೆಯಲ್ಲಿರುವ ಸಿಸಿಟಿವಿಯಿಂದ ಕೆಲವು ಮಹತ್ವದ ಸುಳಿವು ಲಭಿಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

 ಈ ಮಧ್ಯೆ, ಎರಡು ಸಂಘಟನೆಗಳು ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿವೆ. ಆದರೆ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಇದಾಗಿರಬಹುದು ಎಂದು ತನಿಖಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

ಉಗ್ರರ ದಾಳಿ ಶಂಕೆ

ದಿಲ್ಲಿಯ ಇಸ್ರೇಲ್ ರಾಯಭಾರ ಕಚೇರಿಯ ಸನಿಹ ಶುಕ್ರವಾರ ನಡೆದ ಬಾಂಬ್‌ಸ್ಫೋಟ ಭಯೋತ್ಪಾದಕರ ದಾಳಿ ಪ್ರಕರಣವಾಗಿರಬಹುದು ಎಂದು ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಫೋಟ ನಡೆದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಭಾರತ- ಇಸ್ರೇಲ್ ಅಧಿಕಾರಿಗಳ ನಡುವೆ ಸಂಪೂರ್ಣ ಸಹಯೋಗವಿದೆ. ಇಸ್ರೇಲ್ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ನಡೆಸಿದ ದಾಳಿಯಾಗಿದೆ ಎಂದು ಊಹಿಸಲಾಗಿದೆ. ಅದೃಷ್ಟವಶಾತ್ ಯಾರೊಬ್ಬರೂ ಗಾಯಗೊಂಡಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News