×
Ad

ಬೆಂಗಳೂರಿನಲ್ಲಿ 350 ಎಲೆಕ್ಟ್ರಿಕ್ ಬಸ್‌ಗಳು ಶೀಘ್ರವೇ ಓಡಾಟ: ಲಕ್ಷ್ಮಣ ಸವದಿ

Update: 2021-01-31 17:52 IST

ಉಡುಪಿ, ಜ.31: ಇಂಧನ ಉಳಿತಾಯ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಬೆಂಗಳೂರು ನಗರದಲ್ಲಿ 350 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಪಡೆದು ಫೆಬ್ರವರಿ ತಿಂಗಳಲ್ಲಿ ಪ್ರಾಯೋಗಿಕವಾಗಿ ಓಡಾಟ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗವು ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದೊಂದಿಗೆ ಉಡುಪಿ ನಗರದಲ್ಲಿ 3.95ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಪ್ರತೀ ವಿದ್ಯುತ್ ಚಾಲಿತ ಬಸ್‌ಗಳ ಖರೀದಿಗೆ ಕೇಂದ್ರ ಸರಕಾರವು 55 ಲಕ್ಷ ರೂ. ಮತ್ತು ರಾಜ್ಯ ಸರಕಾರ ಸಹ 33ಲಕ್ಷ ರೂ ಸಬ್ಸಿಡಿ ನೀಡಲಿದೆ. ಹೀಗೆ ಸುಮಾರು 2ಕೋಟಿ ಮೊತ್ತದ ಒಂದು ಎಲೆಕ್ಟ್ರಿಕ್ ಬಸ್‌ಗೆ ಒಟ್ಟು 88 ಲಕ್ಷ ರೂ. ಸಬ್ಸಿಡಿ ದೊರೆಯಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಲೀಸ್‌ಗೆ ಪಡೆದ ಬಸ್‌ಗಳ ಟೆಂಡರ್ ಪ್ರಕ್ರಿಯೆ ಆರಂಭ ವಾಗಿದ್ದು, ಹೂಡಿಕೆದಾರರಿಗೆ ಪ್ರತೀ ಕಿ.ಮೀ.ಗೆ ದರ ನಿಗದಿ ಪಡಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ನಗರ ಸಾರಿಗೆಯಲ್ಲೂ ವಿದ್ಯುತ್ ಚಾಲಿತ ಬಸ್‌ಗಳಿಗೆ ಆದ್ಯತೆ ನೀಡಲು ಚಿಂತನೆ ಮಾಡಲಾಗುತ್ತಿದೆ ಎಂದರು.

'26000 ಎಲೆಕ್ಟ್ರಿಕ್ ವಾಹನ'
ರಾಜ್ಯದಲ್ಲಿ ಎಲೆಕ್ಟಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಹ ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 26000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ದೇಶದಲ್ಲಿ ಡಿಸೇಲ್ ಪೆಟ್ರೋಲ್ ಬೆಲೆ ಇಳಿಕೆ ಮಾಡಲು ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪೆಟ್ರೋಲ್‌ನಲ್ಲಿ ಶೇ.20ರಷ್ಟು ಇಥೆನಾಲ್ ಮಿಶ್ರಣ ಮಾಡುವುದರಿಂದ ಇಂಧನ ವೆಚ್ಚ ತಗ್ಗಿಸಲು ಸಾಧ್ಯವಿದೆ ಎಂಬುದು ಕೇಂದ್ರದ ಚಿಂತನೆಯಾಗಿದೆ. ಅದಕ್ಕಾಗಿ ಇಥೆನಾಲ್ ಉತ್ಪಾದನೆಗೆ ಕಾರ್ಯಕ್ರಮಳನ್ನು ಹಮ್ಮಿಕೊಂಡಿದೆ ಎಂದರು.

ಉಡುಪಿಯ ಬನ್ನಂಜೆಯಲ್ಲಿ 31ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿ ರುವ ಗ್ರಾಮಾಂತರ ಬಸ್ ನಿಲ್ದಾಣದ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಗೊಳಿಸಲಾಗುವುದು. ಇದಕ್ಕೆ ಹಿರಿಯ ನಾಯಕ ಡಾ.ವಿ.ಎಸ್.ಆಚಾರ್ಯ ಹೆಸರು ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

'ಪೂರ್ಣ ಸಂಬಳ ನೀಡಿ'
ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪಮಾತನಾಡಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಪೂರ್ಣ ಸಂಬಳವನ್ನು ಎರಡು ತಿಂಗಳೊಳಗೆ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. 2012ರ ನಂತರ ಡಿಸೇಲ್ ಬೆಲೆ ಏರಿಕೆಯಾದರೂ ಸಾರ್ವಜನಿಕರ ಹಿತದೃಷ್ಠಿಯಿಂದ ಬಸ್ ದರದಲ್ಲಿ ಯಾವುದೇ ಏರಿಕೆ ಮಾಡದೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ಹೇಳಿರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಉಡುಪಿ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಿಗಮದ ಉಪಾಧ್ಯಕ್ಷ ಎಸ್.ಎನ್.ಈಶ್ವರಪ್ಪ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷು್ಣವರ್ಧನ್ ಮುಖ್ಯ ಅತಿಥಿಗಳಾಗಿದ್ದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ರಘುಪತಿ ಭಟ್ ವಹಿಸಿದ್ದರು.ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್, ನಿಗಮದ ನಿರ್ದೇಶಕರಾದ ಆರುಂಡಿ ನಾಗರಾಜ್, ಪಿ.ರುದ್ರೇಶ್, ರಾಜು ಪಿ. ಮೊದಲಾದವರು ಉಪಸ್ಥಿತರಿದ್ದರು.

ನಿಗಮದ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ ಸ್ವಾಗತಿಸಿದರು. ವಿಭಾಗೀಯ ಸಂಚಲನಾಧಿಕಾರಿ ಕುಮಲ್ ಕುಮಾರ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

'ಸಾರಿಗೆ ಇಲಾಖೆಗೆ 3000ಕೋ. ನಷ್ಟ'
ಕೊವೀಡ್ ಲಾಕ್‌ಡೌನ್‌ನಿಂದ ಸಾರಿಗೆ ಇಲಾಖೆಗೆ ಸುಮಾರು 3ಸಾವಿರ ಕೋಟಿ ರೂ.ಗಿಂತಲೂ ನಷ್ಟ ಉಂಟಾಗಿದೆ. ಇದರಿಂದ ಸಿಬ್ಬಂದಿಗಳಿಗೆ ಸಂಬಳ ನೀಡಲು ಸಮಸ್ಯೆಯಾಯಿತು. ಪ್ರತಿ ತಿಂಗಳು ನಮ್ಮ 1.30ಲಕ್ಷ ಸಿಬ್ಬಂದಿಗಳಿಗೆ ಸಂಬಳ ನೀಡಲು 324ಕೋಟಿ ಬೇಕಾಗುತ್ತದೆ. ಇದಕ್ಕಾಗಿ ಸರಕಾರದಿಂದ 2 ತಿಂಗಳ ವೇತನಕ್ಕಾಗಿ 650 ಕೋಟಿ ರೂ ನೆರವು ಪಡೆಯಲಾಗಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಇಂದಿಗೂ ಭಯದಿಂದ ಜನ ಬಸ್ಸಿನಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಶೇ.70ರಷ್ಟು ಪ್ರಯಾಣಿಕರು ಮಾತ್ರ ಬಸ್ಸಿನಲ್ಲಿ ಬರುತ್ತಿದ್ದಾರೆ. ಲಾಕ್ ಡೌನ್ ತೆರವುಗೊಂಡ ಆರಂಭದ ನಾಲ್ಕು ತಿಂಗಳು ಇಂಧನ ತುಂಬುವಷ್ಟು ಮಾತ್ರ ಆದಾಯ ಬರುತ್ತಿತ್ತು. ಅದಕ್ಕಾಗಿ ಸಿಬ್ಬಂದಿಗಳ ಏಳು ತಿಂಗಳ ಸಂಬಳ ಪಾವತಿಸಲು ಸರಕಾರದಿಂದ 1740ಕೋಟಿ ರೂ. ಹಣ ಪಡೆದುಕೊಳ್ಳಲಾಗಿದೆ. ರಾಜ್ಯದ ಸಾರಿಗೆ ನೌಕರರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಿದ್ದು, ಅವರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News