×
Ad

ಕೃತಿ ಚೌರ್ಯ ಪ್ರಕರಣ: ನಿರ್ದೇಶಕ ಶಂಕರ್ ಗೆ ಜಾಮೀನುರಹಿತ ವಾರಂಟ್

Update: 2021-01-31 19:20 IST

ಚೆನ್ನೈ: ಐಶ‍್ವರ್ಯಾ ರೈ ಹಾಗೂ ರಜನೀಕಾಂತ್ ಅಭಿನಯದ 'ಎಂದಿರನ್'ಚಿತ್ರದ ನಿರ್ದೇಶಕ ಎಸ್. ಶಂಕರ್ ಕೃತಿ ಚೌರ್ಯ ಪ್ರಕರಣಕ್ಕೆ ಸಂಬಂಧಿಸಿ ಎಗ್ಮೋ ರ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ-2ಕ್ಕೆ ಹಾಜರಾಗಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ.

ಲೇಖಕ ಅರೂರ್ ತಮಿಳ್ ನಾದನ್ ಅವರು ಶಂಕರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ತಾನು ಬರೆದಿರುವ 'ಜಿಗುಬಾ' ಎಂಬ ಕಥಾ ಶೀರ್ಷಿಕೆಯಿಂದ  ಕಥೆಯನ್ನು ಶಂಕರ್ ಕದ್ದಿದ್ದಾರೆ ಎಂದು ಆರೋಪಿಸಿದ್ದರು. ತನ್ನ ಕಥೆಯನ್ನು ನಕಲು ಮಾಡಿ, ಭಾರೀ ಹಣ ಗಳಿಸುವ ಮೂಲಕ ಕೃತಿಸ್ವಾಮ್ಯ ಕಾಯ್ದೆ 1957ನ್ನು ಶಂಕರ್ ಉಲ್ಲಂಘಿಸಿದ್ದಾರೆ ಎಂದು ಲೇಖಕ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಎಸ್. ಶಂಕರ್ ಹಾಗೂ ಅವರ ವಕೀಲರು ಮಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್-2ರ ಎದುರು ಹಾಜರಾಗಲು ವಿಫಲವಾದ ಬಳಿಕ ನ್ಯಾಯಾಲಯ ನಿರ್ದೇಶಕರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು.

ಎಸ್. ಶಂಕರ್ ನಿರ್ದೇಶನದ ‘ಎಂದಿರನ್’ 2010ರಲ್ಲಿ ಬಿಡುಗಡೆಯಾಗಿದ್ದು, ಹಿಂದಿಯಲ್ಲಿ ‘ರೋಬೊಟ್’ ಹೆಸರಿನಲ್ಲಿ ತೆರೆ ಕಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News