ಮಹಾರಾಷ್ಟ್ರದ ಸಿಎಂ ಅವಿವೇಕತನದ ಹೇಳಿಕೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

Update: 2021-01-31 14:10 GMT

ಉಡುಪಿ, ಜ.31: ಮಹಾರಾಷ್ಟ್ರದ ಮುಖ್ಯಮಂತ್ರಿ ಅವಿವೇಕತನದ ಹೇಳಿಕೆ ನೀಡುತ್ತಿದ್ದಾರೆ. ಪದೇಪದೇ ಉದ್ಧಟತನದ ಭಾಷೆ ಬಳಸುತ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ನಮ್ಮ ರಾಜ್ಯದ 2ನೇ ರಾಜಧಾನಿ ಬೆಳಗಾವಿ ಎಂಬುದು ಹೆಮ್ಮೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದೆ. ಕನ್ನಡ ಧಾರವಾಹಿ ಮನೆಯೊಂದು ಮೂರು ಬಾಗಿಲು ಥರ ಆಗಿದೆ. ಎತ್ತು ಏರಿಗೆಳೆ ದರೆ ಕೋಣ ಕೆರೆಗೆ ಎಳೆಯಿತು ಎಂಬಂತಾಗಿದೆ. ಅಸ್ಥಿರತೆ ಉಂಟಾದಾಗ ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಮಾತನಾಡುತ್ತಾರೆ. ಮಹಾರಾಷ್ಟ್ರ ಜನರ ದೂರು, ಟೀಕೆ, ದ್ವೇಷದಿಂದ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ರಾಜ್ಯದಿಂದ ಕೆಲವೊಂದು ಅಭ್ಯರ್ಥಿಗಳ ಹೆಸರುಗಳನ್ನು ಕಳಿಸುವ ಪ್ರಕ್ರಿಯೆ ಆಗುತ್ತಿದೆ. ಚುನಾವಣೆಗೆ ಇನ್ನೂ ಕೂಡ ದಿನಾಂಕ ಘೋಷಣೆಯಾಗಿಲ್ಲ. ಬಿಜೆಪಿ ಗೆಲ್ಲಬೇಕು ಅಂದರೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಅರವಿಂದ ಪಾಟೀಲ್ ಬಿಜೆಪಿಗೆ ಬರುವುದಾದರೆ ಬನ್ನಿ ಎಂದು ಆಹ್ವಾನ ನೀಡಿದ್ದೇವೆ. ಅವರು ಅಭ್ಯರ್ಥಿಯಾಗಬೇಕೋ ಬೇಡವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬರುವವರನ್ನು ವಿರೋಧ ಮಾಡುವುದು ಸರಿಯಲ್ಲ. ಪಕ್ಷ ಬೆಳೆಯಬೇಕಾದರೆ ಬೇರೆ ಕಡೆಯಿಂದ ಮತದಾರರು ಬರಬೇಕಾಗುತ್ತದೆ ಎಂದು ತಿಳಿಸಿದರು.
 
ಅಂಗಡಿ ಪುತ್ರಿ ಸ್ವತಂತ್ರ ಸ್ಪರ್ಧೆಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸವದಿ, ಸದ್ಯ ಅಂತ ಯಾವುದೇ ಪ್ರಶ್ನೆ ಉದ್ಭವ ಆಗಿಲ್ಲ. ಅಭ್ಯರ್ಥಿ ಯಾರು ಎಂಬುದು ಕೂಡ ಚರ್ಚೆಯಾಗಿಲ್ಲ. ಅಂಗಡಿಯವರ ಮನೆತನ ಪಕ್ಷಕ್ಕೆ ನಿಷ್ಠವಾಗಿದೆ. ಅಭ್ಯರ್ಥಿ ಯಾರು ಅಂತ ಇನ್ನೂ ತೀರ್ಮಾನ ಆಗಿಲ್ಲ ಎಂದರು. ಶೀಘ್ರ ವಿಧಾನಸಭಾ ಚುನಾವಣೆ ಬಗ್ಗೆ ಸಿ.ಎಂ.ಇಬ್ರಾಹೀಂ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸವದಿ, ಸಿಎಂ ಇಬ್ರಾಹಿಂ ಭವಿಷ್ಯಕಾರನಲ್ಲ. ಅವರು ಅಂತಹಾ ಜ್ಞಾನಿಯೂ ಅಲ್ಲ. ಭಾಷಣಕಾರ ಮಾತನಾಡುವಾಗ ಹೀಗೆಲ್ಲ ಮಾತಾಡುತ್ತಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News