ಇಂಟರ್‌ನೆಟ್ ಸ್ಥಗಿತ: ಹರ್ಯಾಣದಲ್ಲಿ ದೇವಾಲಯದ ಲೌಡ್ ಸ್ವೀಕರ್ ಬಳಸಲು ರೈತ ನಾಯಕರ ನಿರ್ಧಾರ
ಚಂಡಿಗಢ, ಜ. 31: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ ಉಂಟಾಗುವುದನ್ನು ತಡೆಯಲು ಹರ್ಯಾಣ ಸರಕಾರ ರಾಜ್ಯದ 17 ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದ ಮೊಬೈಲ್ ಇಂಟರ್‌ನೆಟ್ ನಿಷೇಧವನ್ನು ಇನ್ನೊಂದು ದಿನ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮಸ್ಥರಿಗೆ ತಮ್ಮ ಧ್ವನಿ ಕೇಳುವಂತೆ ಹಾಗೂ ಸಂದೇಶ ರವಾನಿಸಲು ದೇವಾಲಯದ ಲೌಡ್ ಸ್ವೀಕರ್ ಬಳಸಲು ರೈತ ನಾಯಕರು ನಿರ್ಧರಿಸಿದ್ದಾರೆ.
ಧರಣಿಯ ಸ್ಥಳದಿಂದ ಪ್ರತಿಭಟನಾಕಾರರನ್ನು ಬಲವಂತದಿಂದ ತೆರವುಗೊಳಿಸಲು ಯಾವುದೇ ರೀತಿ ಪ್ರಯತ್ನಿಸಿದರೆ ಕೂಡಲೇ ಪ್ರತಿಕ್ರಿಯೆ ನೀಡಲು 306 ಗ್ರಾಮಗಳಲ್ಲಿ ಸಮಿತಿಗಳನ್ನು ರೂಪಿಸುವ ನಿರ್ಧಾರವನ್ನು ಜಿಂದ್ ಜಿಲ್ಲೆಯ ಖಾಪ್‌ಗಳ 17 ನಾಯಕರು ನಿರ್ಣಯ ತೆಗೆದುಕೊಂಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದ ಜಿಂದ್-ಪಾಟಿಯಾಲ ಹೆದ್ದಾರಿಯಲ್ಲಿರುವ ಖಾಟ್ಕರ್ ಟೋಲ್ ಪ್ಲಾಝಾದಲ್ಲಿ ಪಂಚಾಯತ್ ಆಯೋಜಿಸಲಾಗಿತ್ತು. ‘‘ಯಾವುದೇ ಸ್ಥಳದಲ್ಲಿ ಇಂತಹ ಯಾವುದೇ ಘಟನೆ ವರದಿಯಾದರೆ, ಗ್ರಾಮದ ರೈತರು ಒಟ್ಟುಗೂಡುವಂತೆ ಗ್ರಾಮದ ದೇವಾಲಯಗಳಲ್ಲಿರುವ ಲೌಡ್ ಸ್ವೀಕರ್‌ನಲ್ಲಿ ಮನವಿ ಮಾಡಲಾಗುವುದು. ನಾವು ರಸ್ತೆ ತಡೆ ನಡೆಸಲು ಚಿಂತಿಸುತ್ತಿದ್ದೇವೆ.
ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯಲು ಅಡ್ಡಿ ಉಂಟಾಗುತ್ತಿದೆ’ ಎಂದು ಜಿಂದ್ ಜಿಲ್ಲೆಯ ಧಾದನ್ ಖಾಪ್‌ನ ನಾಯಕ ಅಝಾದ್ ಪಲ್ವಾ ಹೇಳಿದ್ದಾರೆ. ರೈತರ ಪ್ರತಿಭಟನೆ ಅಂತ್ಯವಾಗುವ ವರೆಗೆ ಹಾಗೂ ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂದೆಗೆದುಕೊಳ್ಳುವ ವರೆಗೆ ವಿವಾಹ ಸಮಾರಂಭ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬಿಜೆಪಿ-ಜೆಜೆಪಿ ನಾಯಕರನ್ನು 306 ಗ್ರಾಮಗಳ ಯಾರೊಬ್ಬರು ಆಹ್ವಾನಿಸದಿರಲು ಖಾಪ್ ನಿರ್ಧಾರ ತೆಗೆದುಕೊಂಡಿದೆ.