ಸುಬ್ರಹ್ಮಣ್ಯ ಧಾರೇಶ್ವರರಿಗೆ ಕುರಿಯ ಪ್ರಶಸ್ತಿ ಪ್ರದಾನ
Update: 2021-01-31 20:52 IST
ಕುಂದಾಪುರ, ಜ.31: ಉಜಿರೆ ಕುರಿಯ ವಿಟ್ಠಲ ಶಾಸಿ ಯಕ್ಷಗಾನ ಪ್ರತಿಷ್ಠಾನ, ಕುಂದಾಪುರ ಕಲಾಕ್ಷೇತ್ರ, ರೋಟರಿ ಕ್ಲಬ್ ವಲಯ 1ರ ಸಹಯೋಗ ದಲ್ಲಿ ಕುಂದಾಪುರದ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪದಲ್ಲಿ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ 2020ನೇ ಸಾಲಿನ ಕುರಿಯ ವಿಠಲ ಶಾಸ್ತ್ರಿ ಯಕ್ಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಯಕ್ಷಗಾನವು ಇದರಿಂದ ಹೊರತಲ್ಲ ಎಂದು ಹೇಳಿದರು.
ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ, ರೋಟರಿ ಕ್ಲಬ್‌ನ ಡಾ. ಜಗದೀಶ ಶೆಟ್ಟಿ ಉಪಸ್ಥಿತರಿದ್ದರು. ವಿ.ಉಮಾಕಾಂತ್ ಭಟ್ ಅಭಿನಂದನ ನುಡಿಗಳನ್ನಾಡಿದರು. ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.