×
Ad

ಪತ್ರಕರ್ತ ಮನ್‌ದೀಪ್ ಪುನಿಯಾ ಬಂಧನ: ಪೊಲೀಸ್ ಕೇಂದ್ರ ಕಚೇರಿ ಎದುರು ಪತ್ರಕರ್ತರಿಂದ ಪ್ರತಿಭಟನೆ

Update: 2021-01-31 21:29 IST

ಹೊಸದಿಲ್ಲಿ, ಜ. 31: ಫ್ರೀಲ್ಯಾನ್ಸರ್ ಪತ್ರಕರ್ತ ಹಾಗೂ ‘ಕಾರವಾನ್’ ಪತ್ರಿಕೆಯ ಬರೆಹಗಾರ ಮನ್‌ದೀಪ್ ಪುನಿಯಾ ಅವರ ಬಂಧನ ಖಂಡಿಸಿ ದಿಲ್ಲಿಯ ಪತ್ರಕರ್ತರು ಇಲ್ಲಿನ ಪಟೇಲ್ ಚೌಕ್ ಪ್ರದೇಶದ ಹೊಸ ಪೊಲೀಸ್ ಕೇಂದ್ರ ಕಚೇರಿಯ ಎದುರು ರವಿವಾರ ಪ್ರತಿಭಟನೆ ನಡೆಸಿದರು.

 ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ನಡೆದ ಘರ್ಷಣೆಯ ವರದಿ ಮಾಡಲು ನಿಯೋಜನೆಯಾಗಿದ್ದ ಪುನಿಯಾ ಅವರನ್ನು ದಿಲ್ಲಿ ಪೊಲೀಸರು ಶನಿವಾರ ಕಸ್ಟಡಿಗೆ ತೆಗೆದುಕೊಂಡಿದ್ದರು. ಪೊಲೀಸ್ ಕೇಂದ್ರ ಕಚೇರಿಯ ಹೊರಗೆ ಸೇರಿದ ಪ್ರತಿಭಟನಾಕಾರರು ಪುನಿಯಾ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು ಹಾಗೂ ‘ಪತ್ರಕರ್ತರ ಏಕತೆ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಪೊಲೀಸರು ಸುರಕ್ಷಿತ ಅಂತರ ಸೇರಿದಂತೆ ಕೊರೋನ ವೈರಸ್‌ನ ಶಿಷ್ಟಾಚಾರಗಳನ್ನು ಅನುಸರಿಸುವಂತೆ ಪತ್ರಕರ್ತರಲ್ಲಿ ವಿನಂತಿಸಿದರು. ಸಿಂಘು ಗಡಿಯಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಪುನಿಯಾ ಅವರು ದುರ್ವರ್ತನೆ ತೋರಿದ್ದಾರೆ ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ. ಆನ್‌ಲೈನ್ ನ್ಯೂಸ್ ಇಂಡಿಯಾದ ಇನ್ನೋರ್ವ ಪತ್ರಕರ್ತ ಧರ್ಮೇಂದ್ರ ಸಿಂಗ್ ಅವರನ್ನು ಕೂಡ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಆದರೆ, ಅನಂತರ ಬಿಡುಗಡೆ ಮಾಡಿದ್ದರು. ಅಗತ್ಯ ಇರುವ ಕಾನೂನು ಕ್ರಮಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ ಎಂದು ಕಾರವಾನ್ ಮ್ಯಾಗಝಿನ್‌ನ ರಾಜಕೀಯ ಸಂಪಾದಕ ಹರ್ತೋಶ್ ಸಿಂಗ್ ಬಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News