ಪೇಶಾವರ: ರಾಜ್‌ಕಪೂರ್,ದಿಲೀಪ್ ಕುಮಾರ್ ಪೂರ್ವಿಕರ ನಿವಾಸ ಖರೀದಿಗೆ ಪಾಕ್ ಸರಕಾರ ಯತ್ನ

Update: 2021-01-31 18:20 GMT

ಪೇಶಾವರ,ಜ.31: ಬಾಲಿವುಡ್‌ನ ಮೇರು ನಟರಾದ ದಿಲೀಪ್ ಕುಮಾರ್ ಹಾಗೂ ರಾಜ್ ಕಪೂರ್ ಅವರ ಪೂರ್ವಿಕರ ಮನೆಗಳನ್ನು ಖರೀದಿಸಲು ಅವುಗಳ ಹಾಲಿ ಮಾಲಕರನ್ನು ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಸರಕಾರವು ಸಂಪರ್ಕಿಸಿದೆ. ಪೇಶಾವರ ನಗರದಲ್ಲಿರುವ ಈ ಎರಡು ಐತಿಹಾಸಿಕ ಕಟ್ಟಡಗಳನ್ನು ವಸ್ತುಸಂಗ್ರಹಾಲಯಗಳಾಗಿ ಮಾರ್ಪಡಿಸುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

   ಖೈಬರ್ ಪಖ್ತೂನ್‌ಖ್ವಾ ಪ್ರಾಂತದ ಮುಖ್ಯಮಂತ್ರಿಯವರ ವಿಶೇಷ ಮಾಹಿತಿ ಸಹಾಯಕ ಕಮ್ರನ್ ಬಂಗಾಶ್ ಅವರು, ಲಾಹೋರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇವೆರಡು ಪುರಾತನ ಕಟ್ಟಡಗಳನ್ನು ಖರೀದಿಸುವುದಕ್ಕಾಗಿ, ಅವುಗಳ ಮಾಲಕರ ಜೊತೆ ಪ್ರಾಂತ ಸರಕಾರವು ಸೌಹಾರ್ದಯುತವಾದ ಇತ್ಯರ್ಥಕ್ಕೆ ಬರಲಿದೆ ಯೆಂದು ತಿಳಿಸಿದರು.

ಈ ಇಬ್ಬರು ಮಹಾನ್ ನಟರ ಪೂರ್ವಿಕರ ನಿವಾಸಗಳನ್ನು ಖರೀದಿಸಲು ಖೈಬರ್ ಪಖ್ತೂನ್‌ಖ್ವಾ ಪ್ರಾಂತ ಸರಕಾರವು ಈ ತಿಂಗಳ ಆರಂಭದಲ್ಲಿ 2.35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.

ದಿಲೀಪ್ ಕುಮಾರ್ ಅವರ 101 ಚದರ ಮೀಟರ್‌ನ ಮನೆಗೆ 80.56 ಲಕ್ಷ ರೂ. ಬೆಲೆಯನ್ನು ನಿಗದಿಪಡಿಸಿದೆ ಹಾಗೂ ರಾಜ್ ಕಪೂರ್ ಅವರ 151.75 ಚದರ ಮೀಟರ್ ವಿಸ್ತೀರ್ಣದ ಮನೆಗೆ 1.50 ಕೋಟಿ ರೂ. ನಿಗದಿಪಡಿಸಿದೆ.ಆದಾಗ್ಯೂ ಪ್ರಾಂತ ಸರಕಾರವು ತೀರಾ ಕಡಿಮೆ ಮೌಲ್ಯವನ್ನು ನಿಗದಿಪಡಿಸಿದೆ ಎಂದು ಆಕ್ಷೇಪಿಸಿ ಅವುಗಳನ್ನು ಮಾರಾಟ ಮಾಡಲು ಹಾಲಿ ಮಾಲಕರು ನಿರಾಕರಿಸಿದ್ದರು.

 ಕಪೂರ್ ಹವೇಲಿ ಎಂದೇ ಖ್ಯಾತವಾದ ರಾಜ್‌ಕಪೂರ್ ಅವರ ನಿವಾಸವು ಪೇಶಾವರ ನಗರದ ಖಿಸ್ಸಾ ಖ್ವಾನಿ ಬಝಾರ್ ಪ್ರದೇಶದಲ್ಲಿದೆ. ಈ ಮನೆಯನ್ನು ರಾಜ್‌ಕಪೂರ್ ಅವರ ತಾತಾ ಬಸೇಶ್ವರ್‌ನಾಥ್ 1918-1922ರ ನಡುವಿನ ಅವಧಿಯಲ್ಲಿ ನಿರ್ಮಿಸಿದ್ದರು. ಇದೇ ಮನೆಯಲ್ಲಿ ರಾಜ್‌ಕಪೂರ್ ಹಾಗೂ ಅವರ ಚಿಕ್ಕಪ್ಪ ತ್ರಿಲೋಕ್ ಕಪೂರ್ ಜನಿಸಿದ್ದರು.

ಹಿರಿಯ ನಾಯಕ ದಿಲೀಪ್ ಕುಮಾರ್ ಅವರ 100 ವರ್ಷಗಳಷ್ಟು ಪುರಾತನವಾದ ಮನೆ ಕೂಡಾ ಇದೇ ಪ್ರದೇಶದಲ್ಲಿದೆ. ಪಾಳುಬಿದ್ದ ಸ್ಥಿತಿಯಲ್ಲಿರುವ ಈ ಮನೆಯನ್ನು 2014ರಲ್ಲಿ ಆಗಿನ ನವಾಝ್ ಶರೀಫ್ ಸರಕಾರವು ರಾಷ್ಟ್ರೀಯ ಪರಂಪರೆಯ ಆಸ್ತಿಯನ್ನಿಗ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News