×
Ad

ಕೊಣಾಜೆ ಭಜನಾ ಮಂದಿರ ಮಲಿನ ಪ್ರಕರಣ: ಇಬ್ಬರ ಸೆರೆ

Update: 2021-02-01 16:14 IST

ಮಂಗಳೂರು, ಫೆ.1: ನಗರದ ಹೊರವಲಯದ ಕೊಣಾಜೆ ಸಮೀಪದ ಗೋಪಾಲಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಮಲ, ಮೂತ್ರ ವಿಸರ್ಜಿಸಿ ಮಲಿನಗೊಳಿಸಿದ ಆರೋಪಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ತಲಪಾಡಿಯ ಕೊಮರಂಗಳ ನಿವಾಸಿ ಮುಹಮ್ಮದ್ ಸುಹೈಲ್ (19) ಮತ್ತು ತಲಪಾಡಿಯ ಪಿಲಿಕೂರು ನಿವಾಸಿ ನಿಝಾಮುದ್ದೀನ್ (21) ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿ ವಿವಿಧೆಡೆ ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದ್ದ ಇಬ್ಬರು ಯುವಕರ ಕೃತ್ಯದ ಬೆನ್ನತ್ತಿ ಹೋದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಗೋಪಾಲಕೃಷ್ಣ ಮಂದಿರದ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲು ನುಗ್ಗಿದ್ದರು. ಆದರೆ, ಅಲ್ಲಿ ಯಾವುದೇ ಬೆಲೆಬಾಳುವ ಸೊತ್ತು ಸಿಕ್ಕಿರಲಿಲ್ಲ. ಕಾಣಿಕೆ ಡಬ್ಬಿ ಒಡೆದ ಕೃತ್ಯ ಬೇರೆ ಯಾರೋ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸಲು ಮಲ, ಮೂತ್ರ ವಿಸರ್ಜಿಸಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕೃತ್ಯದಲ್ಲಿ ಇನ್ನೂ ಆರು ಆರೋಪಿಗಳು ಪಾಲ್ಗೊಂಡಿರುವ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಕೊಣಾಜೆ, ಉಳ್ಳಾಲ, ಕಂಕನಾಡಿ ಗ್ರಾಮಾಂತರ, ಪೂಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಒಂಭತ್ತು ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದುದು ಕೂಡ ಕಂಡುಬಂದಿದೆ. ಈ ಪೈಕಿ ಐದು ದೈವಸ್ಥಾನದ ಹುಂಡಿ ಕಳವು ಪ್ರಕರಣಗಳಾಗಿವೆ. ಕೊಣಾಜೆಯಲ್ಲಿ ಮಂದಿರದ ಕೃತ್ಯ ನಡೆಯುವುದಕ್ಕೂ ಸ್ವಲ್ಪ ದಿನಗಳ ಹಿಂದೆ ಅಲ್ಲಿಯೇ ಸಮೀಪದಲ್ಲಿ ದೈವಸ್ಥಾನ ಒಂದರ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದರು. ಅದರಲ್ಲಿ ಹಣ ಕಳವುಗೈದು, ಕಾಣಿಕೆ ಡಬ್ಬಿಯನ್ನು ಗೋಪಾಲಕೃಷ್ಣ ಮಂದಿರದ ಬಳಿ ಎಸೆದಿದ್ದರು. ಅದೇ ದಿನ ಗೋಪಾಲಕೃಷ್ಣ ಮಂದಿರಕ್ಕೂ ನುಗ್ಗಲು ಸಂಚು ರೂಪಿಸಿದ್ದರು ಎಂದರು.

ಪಿಲಿಕೂರು ಎಂಬಲ್ಲಿ ಸಿಕ್ಕಿದ ಸಿಸಿಟಿವಿ ಕ್ಯಾಮರಾದ ವೀಡಿಯೊ ಆಧರಿಸಿ, ಸಂಶಯಯದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದುಷ್ಕೃತ್ಯ ಬಯಲಾಗಿದೆ. ಕೊಣಾಜೆ ಪರಿಸರದ ಮುಲಾರದ ಅರಸು ಮುಂಡಿತ್ತಾಯ ದೈವಸ್ಥಾನದ ಕಾಣಿಕೆ ಹುಂಡಿ ಕಳವು, ಜ.15ರಂದು ಮಾಡೂರಿನ ರಸ್ತೆ ಬದಿಯ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು, ಕುತ್ತಾರಿನ ಆದಿಸ್ಥಳದ ಕೊರಗಜ್ಜ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು ಯತ್ನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ ಕೌಂಟರಿಗೆ ನುಗ್ಗಿ ಕಳವು ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ, ಚೂರಿ, ಸ್ಪಾನರ್, ವಿವಿಧ ರೀತಿಯ ಕಾಣಿಕೆ ಡಬ್ಬಿಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತಿನ ಮೌಲ್ಯ 35 ಸಾವಿರ ರೂ. ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ವೀಡಿಯೊ, ಮಾಹಿತಿ ಹಂಚಿಕೊಳ್ಳಲು ಕಮಿಷನರ್ ಮನವಿ

ಮಂಗಳೂರು ಪೂರ್ವ (ಕದ್ರಿ), ಕಂಕನಾಡಿ, ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ದೈವಸ್ಥಾನದ ಕಾಣಿ ಡಬ್ಬಿ ಮಳಿನಗೊಳಿಸಿ ದುಷ್ಕೃತ್ಯ ಎಸಗಿರುವ ಪ್ರಕರಣದಲ್ಲಿ ಇವರ ಕೈವಾಡ ಕಂಡುಬಂದಿಲ್ಲ. ಅದರಲ್ಲಿ ಬೇರೆಯದ್ದೇ ತಂಡ ಭಾಗಿಯಾಗಿರುವ ಸಾಧ್ಯತೆಯಿದೆ. ಅದರ ಬಗ್ಗೆ ಸುಳಿವು ಲಭಿಸಿದ್ದು, ತನಿಖೆ ನಡೆಸಲಾಗುತ್ತಿದೆ. ದೈವಸ್ಥಾನ ಮಳಿನ ಪ್ರಕರಣಗಳ ಬಗ್ಗೆ ಸಿಸಿಟಿವಿ ವೀಡಿಯೊ ಅಥವಾ ಕೃತ್ಯದ ಬಗ್ಗೆ ಇನ್ನಿತರ ಮಾಹಿತಿಗಳಿದ್ದರೆ ಸಾರ್ವಜನಿಕರು ಪೊಲೀಸರಿಗೆ ಹಂಚಿಕೊಳ್ಳಬಹುದು. ಇಂಥ ಮಾಹಿತಿಗಳಿಂದ ಆರೋಪಿಗಳನ್ನು ಹಿಡಿಯಲು ಸಹಾಯವಾಗುತ್ತದೆ ಎಂದು ಪೊಲೀಸ್ ಆಯುಕ್ತ ಹೇಳಿದರು.

ಕಾಣಿಕೆ ಡಬ್ಬಿ ಕಳವು ಪ್ರಕರಣದ ಆರೋಪಿಗಳು ಬೇರೆ ಕೆಲವು ಪ್ರಕರಣಗಳಲ್ಲೂ ಭಾಗಿಯಾಗಿರುವ ಸಾಧ್ಯತೆಯಿದೆ. ಪೆಟ್ರೋಲ್ ಪಂಪ್ ಮತ್ತು ಅಂಗಡಿಗೆ ನುಗ್ಗಿ ಹಣ ಕದ್ದಿರುವ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ಪ್ರತಿ ಪ್ರಕರಣದಲ್ಲೂ 10 ಸಾವಿರದಿಂದ ಲಕ್ಷ ರೂ.ವರೆಗೆ ನಗದು ಸಿಕ್ಕಿರುವ ಬಗ್ಗೆ ಮಾಹಿತಿ ಇದೆ. ಕೊಣಾಜೆ ಪ್ರಕರಣದಲ್ಲಿ ಮಾತ್ರ ಅಲ್ಲಿ ಹಣ ಸಿಕ್ಕಿಲ್ಲವೆಂದು ಪ್ರಕರಣದ ದಿಕ್ಕು ತಪ್ಪಿಸಲು ಮಲ ವಿಸರ್ಜಿಸಿ ತಂತ್ರ ಹೂಡಿದ್ದರು ಎಂದು ಆಯುಕ್ತರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News