ಉಡುಪಿಯಲ್ಲಿ ಮಾ.17ರಿಂದ ಸೇನಾ ನೇಮಕಾತಿ ರ್ಯಾಲಿ: ಜಿ.ಜಗದೀಶ್
ಉಡುಪಿ, ಫೆ.1: ಭಾರತೀಯ ಸೇನೆಗೆ ಸೇರಲು ಈಗಾಗಲೇ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದ.ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ತರುಣರಿಗೆ ಉಡುಪಿ ಜಿಲ್ಲೆಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 17ರಿಂದ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಸೇನಾ ರ್ಯಾಲಿಯಲ್ಲಿ 38,500 ಅ್ಯರ್ಥಿಗಳು ಭಾಗವಹಿಸುತಿದ್ದು, ಅವರಿಗೆ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಸ್ವಚ್ಚತೆ, ಶಾಮಿಯಾನ, ಬ್ಯಾರಿಕೇಡ್ ಅಳವಡಿಕೆ, ಲೈಟ್ ವ್ಯವಸ್ಥೆ, ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಮತ್ತು ಅಗ್ನಿಶಾಮಕ ವ್ಯವಸ್ಥೆ ಹಾಗೂ ಸುರಕ್ಷ ತೆಯ ದೃಷ್ಟಿಯಿಂದ ಪೊಲೀಸ್ ನಿಯೋಜನೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಒದಗಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಪರಿಶೀಲನೆ ನಡೆಸಲು ಸೂಕ್ತ ಸಿಬ್ಬಂದಿಯನ್ನು ನೇಮಿಸುವಂತೆ ಡಿಡಿಪಿಐಗೆ, ರ್ಯಾಲಿ ಸ್ಥಳದಲ್ಲಿ ಅಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಆಯ್ಕೆ ನಡೆಸಲು ಆಗಮಿಸುವ ಸೇನಾ ಸಿಬ್ಬಂದಿಗೆ ವಸತಿ ವ್ಯವಸ್ಥೆ ಹಾಗೂ ಸೂಕ್ತ ವಾಹನಗಳ ವ್ಯವಸ್ಥೆ ಒದಗಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಿಡಿಪಿಐ ಎನ್.ಹೆಚ್.ನಾಗೂರ, ಮಂಗಳೂರು ಸೇನಾ ನೇಮಕಾತಿಯ ನಿರ್ದೇಶಕ ಕರ್ನಲ್ ದುಭಾಶ್ ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.