ಎಸೆಸೆಲ್ಸಿ ಉತ್ತಮ ಫಲಿತಾಂಶಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ: ಉಡುಪಿ ಡಿಸಿ

Update: 2021-02-01 14:58 GMT

ಉಡುಪಿ, ಫೆ. 1: ಹೊಸ ಗುರಿಗಳೊಂದಿಗೆ ಈ ವರ್ಷ ಎಸೆಸೆಲ್ಸಿ ಫಲಿತಾಂಶ ಅಭಿವೃದ್ದಿಗೆ ಕ್ರಿಯಾ ಯೋಜನೆ ಸಿದ್ದಪಡಿಸಬೇಕು. ಪ್ರತಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಲ್ಲಿ ಸಮನ್ವಯತೆ ಇರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ದತ್ತು ಪಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಮಾಡಲು ಮೊದಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿಯನ್ನು ಶಾಲಾವಾರು ಗುರುತಿಸಿ, ತಾಲೂಕು ಮಟ್ಟದಲ್ಲಿ ಕ್ರೋಢೀಕರಿಸಿ ಜಿಲ್ಲಾ ಮಟ್ಟಕ್ಕೆ ಒಂದು ವಾರದಲ್ಲಿ ಒಪ್ಪಿಸಬೇಕು. ಇಂತಹ ಮಕ್ಕಳಿಗೆ ಉತ್ತೀರ್ಣಗೊಳಿಸಲು ಜಿಲ್ಲಾ ಹಂತದಲ್ಲಿ ವಿಷಯ ವಾರು ಪಾಸಿಂಗ್ ಪ್ಯಾಕೇಜ್ ಸಿದ್ದಪಡಿಸಬೇಕು. ಈ ಪಾಸಿಂಗ್ ಪ್ಯಾಕೇಜ್ ಪುಸ್ತಕ ಮುದ್ರಣವನ್ನು ಜಿಲ್ಲಾಡಳಿತದ ವತಿಯಿಂದಲೇ ಮಾಡಿಕೊಡಲಾಗುವುದು ಎಂದರು.

ಮಕ್ಕಳ ಗುಂಪು ಮಾಡುವಾಗ ಮಕ್ಕಳು ವಿಷಯವಾರು ಕಲಿಕೆಯಲ್ಲಿ ಹಿಂದುಳಿ ಯುವಿಕೆಯನ್ನು ಆಧರಿಸಿ ಗುಂಪು ಮಾಡಿ ಅದೇ ವಿಷಯದ ಶಿಕ್ಷಕರಿಗೆ ದತ್ತು ನೀಡಬೇಕು. ದತ್ತು ತೆಗೆದುಕೊಂಡ ಅಧಿಕಾರಿಗಳು, ಶಿಕ್ಷಕರು ಸಿದ್ದತೆಯೊಂದಿಗೆ ಮತ್ತು ಪಾಠ ಟಿಪ್ಪಣಿ, ಟಿಎಲ್‌ಎಂಗಳೊಂದಿಗೆ ಪಾಠ ಮಾಡುತಿತಿರುವರೋ ಎಂಬುದನ್ನು ಅವಲೋಕಿಸಬೇಕು ಎಂದು ಅವರು ಹೇಳಿದರು.

ಪ್ರತಿ ಶಾಲೆಗೆ ಒಬ್ಬರನ್ನು ಮೆಂಟರ್‌ಗಳನ್ನು ನೇಮಿಸಿ ಅವರಿಂದ ಮಕ್ಕಳಿಗೆ, ಶಿಕ್ಷಕರಿಗೆ, ಮುಖ್ಯ ಗುರುಗಳಿಗೆ ಅಗತ್ಯ ಮಾರ್ಗದರ್ಶನ ನೀಡುಲು ವ್ಯವಸ್ಥೆ ಮಾಡಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿರುವ ಪ್ರೌಢ ಶಾಲಾ ವಿಭಾಗದ ಫಲಿತಾಂಶ ಮತ್ತು ಅನುದಾನಿತ ಶಾಲೆಗಳ ಫಲಿತಾಂಶಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.

ಸಭೆಯಲ್ಲಿ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅಶೋಕ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 2019-20ರಲ್ಲಿ ಎಸೆಸೆಲ್ಸಿ ಫಲಿತಾಂಶದ ಬಗ್ಗೆ ಶಿಕ್ಷಣಾಧಿಕಾರಿ ಜಾಹ್ನವಿ, ಎಸೆಸೆಲ್ಸಿ ಜಿಲ್ಲಾ ನೋಡಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News