ಮೊದಲ ಟೆಸ್ಟ್: ಎರಡನೇ ವೇಗದ ಬೌಲರ್ ಸ್ಥಾನಕ್ಕಾಗಿ ಸಿರಾಜ್-ಇಶಾಂತ್ ನಡುವೆ ಪೈಪೋಟಿ

Update: 2021-02-02 14:43 GMT

ಹೊಸದಿಲ್ಲಿ, ಫೆ.2: ಆಟಗಾರರ ಗಾಯಾಳು ಸಮಸ್ಯೆಯಿಂದಾಗಿ ಹೆಚ್ಚು ಆಯ್ಕೆ ಹೊಂದಿರದ ಭಾರತೀಯ ಕ್ರಿಕೆಟ್ ತಂಡ ಇದೀಗ ವಿಭಿನ್ನ ಸಮಸ್ಯೆ ಎದುರಿಸುತ್ತಿದ್ದು, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಎರಡನೇ ಮಧ್ಯಮ ವೇಗದ ಬೌಲರ್ ಸ್ಥಾನಕ್ಕಾಗಿ ಹಿರಿಯ ಬೌಲರ್ ಇಶಾಂತ್ ಶರ್ಮಾ ಹಾಗೂ ಯುವ ಬೌಲರ್ ಮುಹಮ್ಮದ್ ಸಿರಾಜ್ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ.

ಸಾಂಪ್ರದಾಯಿಕವಾಗಿ ಚೆನ್ನೈನ ಚಿಪಾಕ್ ಸ್ಟೇಡಿಯಂ ಸ್ಪಿನ್ನರ್‌ಗಳ ಸ್ನೇಹಿಯಾಗಿದೆ. ಹೀಗಾಗಿ ಭಾರತವು ಫೆ.5ರಿಂದ 9ರ ತನಕ ನಡೆಯಲಿರುವ ಮೊದಲ ಪಂದ್ಯಕ್ಕೆ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದೆ.

ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ವಂಚಿತರಾಗಿದ್ದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಫಿಟ್ ಆಗಿ ತಂಡಕ್ಕೆ ಮರಳಿದ್ದು,ಅವರೇ ವೇಗದ ಬೌಲಿಂಗ್ ಸಾರಥ್ಯವಹಿಸಲಿದ್ದಾರೆ. ಅವರೊಂದಿಗೆ ಎರಡನೇ ವೇಗದ ಬೌಲರ್ ಆಗಿ ಯಾರು ಕಣಕ್ಕಿಳಿಯಲಿದ್ದಾರೆಂಬ ಕುರಿತು ಕುತೂಹಲ ಗರಿಗೆದರಿದೆ.

 ಸುಮಾರು 1 ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿರುವ 32ರ ಹರೆಯದ ಇಶಾಂತ್ ಶರ್ಮಾರ ಫಾರ್ಮ್ ಬಗ್ಗೆ ಪ್ರಶ್ನೆ ಎದ್ದಿದೆ. ಮತ್ತೊಂದೆಡೆ ಸಿರಾಜ್ ಭರ್ಜರಿ ಫಾರ್ಮ್‌ನಲ್ಲಿದ್ದು, ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News