×
Ad

ತೈಲ ಬೆಲೆ ಏರಿಕೆ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದ ತುಳು ನಟ ಶೋಭರಾಜ್ ಪಾವೂರುಗೆ ಬೆದರಿಕೆ, ಅವಹೇಳನ

Update: 2021-02-03 11:31 IST

ಮಂಗಳೂರು : ತೈಲ ಬೆಲೆ ಏರಿಕೆ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ತುಳು ಚಲನಚಿತ್ರ ನಟ, ನಿರ್ದೇಶಕ ಶೋಭರಾಜ್ ಪಾವೂರು ಅವರಿಗೆ ಬೆದರಿಗೆ, ಅವಹೇಳನ ಮಾಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.

ಶೋಭರಾಜ್ ಅವರು "ನಮೋ.... ನಮಗೆ ಮೋಸ.. ಪೆಟ್ರೋಲ್ ಧಗ ಧಗ.... ಡೀಸೆಲ್ ಭಗ ಭಗ ಎಂದು ನಿನ್ನೆ ಫೇಸ್ ಬುಕ್ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಗೆ  ಬೆದರಿಕೆ ಹಾಗು ಅವಹೇಳನಕಾರಿ ಕಮೆಂಟ್ ಬಂದ ಕಾರಣ ಶೋಭರಾಜ್ ಅವರು ತಮ್ಮ ಪೋಸ್ಟನ್ನು ಡಿಲಿಟ್ ಮಾಡಿದ್ದರು.

ಈ ಪೋಸ್ಟ್ ವಿರುದ್ಧ ಬಿಜೆಪಿ ಹಾಗು ಸಂಘಪರಿವಾರದ ಕಾರ್ಯಕರ್ತರು ಎಂದು ಹೇಳಲಾದ ಹಲವರು ಶೋಭರಾಜ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ. 

'ಬಿಜೆಪಿ ಮಂಜೇಶ್ವರ' ಎಂದು ಹೇಳಲಾದ ಫೇಸ್ ಬುಕ್ ಖಾತೆ " ಇಷ್ಟು ದೇಶದ ಅಭಿವೃದ್ಧಿಯಾಗುವಾಗ ನಿನ್ನಂಥ ಕಜ್ಜಿ ನಾಯಿಗಳು ಬಿಸ್ಕಟ್ ಗಾಗಿ ಬೊಗಳುವುದು ನಿನ್ನ ಮೂಲಯಾವುದೆಂದು ತೋರಿಸಿಕೊಡುತ್ತದೆ'' ಎಂದು ಕಮೆಂಟ್ ಮಾಡಿದೆ.

ಸಂದೀಪ್ ಸಿದ್ಧಕಟ್ಟೆ ಎಂಬಾತ " ಫಿಲ್ಮ್ ರಿಲೀಸ್ ಮಾಡುತ್ತೇವೆ ಎಂದು ಜನರಿಂದ ಹಣ ಪಡೆದು ಫಿಲ್ಮ್ ರಿಲೀಸ್ ಮಾಡದೆ ಮೋಸ ಮಾಡಿದ್ದು ಇವನೇ ಅಲ್ವ ಎಂದು ತುಳುವಿನಲ್ಲಿ ಫೇಸ್ ಬುಕ್ ಕಮೆಂಟ್ ಮಾಡಿದ್ದಾನೆ.

ರವಿಚಂದ್ರ ನಾಯ್ಕ್ ಎಂಬಾತ " ಇದು ನಿನಗೆ ಬೇಕಾ ? ರಾಜಕೀಯವಾಗಿ ತಾಂಟುವುದಾದರೆ ರಾಜಕೀಯಕ್ಕೆ ಹೋಗು, ಅದು ಬಿಟ್ಟು ಇಂತಹ ಪ್ರಚಾರ ಅಗತ್ಯ ಇದೆಯಾ ಎಂದು ತುಳುವಿನಲ್ಲಿ ಪ್ರಶ್ನಿಸಿದ್ದಾನೆ.

ನಂತರ ಶೋಭರಾಜ್ ಪಾವೂರು ಅವರು ತಮ್ಮ ಫೇಸ್ ಬುಕ್ ಪೋಸ್ಟ್ ಗೆ ತುಳುವಿನಲ್ಲಿ ಸ್ಪಷ್ಟೀಕರಣ ನೀಡಿದ್ದು, ಈ ಸ್ಪಷ್ಟೀಕರಣಕ್ಕೂ ಅವಹೇಳನಕಾರಿ, ಬೆದರಿಕೆಯ ಕಮೆಂಟ್ ಬಂದ ಕಾರಣ ಶೋಭರಾಜ್ ಅವರು ತಮ್ಮ ಸ್ಪಷ್ಟೀಕರಣವನ್ನೂ ಡಿಲಿಟ್ ಮಾಡಿದ್ದಾರೆ.

ಶೋಭರಾಜ್ ಅವರು ತುಳುವಿನಲ್ಲಿ ಬರೆದ ಸ್ಪಷ್ಟೀಕರಣ ಹೀಗಿದೆ –

“ನಮೋ ಎಂದರೆ ನಮ್ಮ ಮೋದಿ ಎಂದು ತಿಳಿದಿದ್ದೆ, ಮೋದಿ ಅವರ ಮುಖ ನೋಡಿ ಓಟು ಹಾಕಿದೆ, ನಾನು ದುಡಿದ ಚಿಲ್ಲರೆ ಹಣದಲ್ಲೂ ಟ್ಯಾಕ್ಸ್ ಕಟ್ಟುತ್ತಿದ್ದೇನೆ ಎಂಬ ಅಧಿಕಾರದಲ್ಲಿ ಮತ್ತು ಅವರವರ ಫೇಸ್ ಬುಕ್ ವಾಲ್ ನಲ್ಲಿ ಏನನ್ನು ಪೋಸ್ಟ್ ಮಾಡಬಹುದು ಎಂಬ ಸಾಮಾನ್ಯ ಜ್ಞಾನ ಇದ್ದ ಕಾರಣ ನಾನು ಸ್ಟೇಟಸ್ ಹಾಕಿದ್ದೇನೆ…

ನನ್ನ ಸ್ಟೇಟಸ್ ನಿಂದ ಯಾರಿಗಾದರೂ ಮನಸ್ಸಿಗೆ ಬೇಜಾರಾಗಿದ್ದಲ್ಲಿ ನನಗೆ ಕ್ಷಮಿಸಿ…

ನಿಮ್ಮ ಕಮೆಂಟ್ ನಿಂದ ನನಗೆ ಯಾವುದೇ ಬೇಸರವಿಲ್ಲ. ಯಾಕೆಂದರೆ ನಾನು ಯಾದ್ಯಾವುದನ್ನೂ ನೋಡಿಲ್ಲ...

ನನ್ನ ವೈಯಕ್ತಿಕ ನಿರ್ಧಾರದಿಂದ ನನ್ನ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರಿಗೆ ಆಗಲಿ, ನಿಮಗಾಗಲಿ ಬೇಸರ, ಕಿರಿಕಿರಿ, ಹಿಂಸೆಯಾಗುವುದಾದಲ್ಲಿ ಅಂತಹ ನಿರ್ಧಾರದಿಂದ ನಾನು ಹಿಂದೆ ಸರಿಯುತ್ತೇನೆ…''

- ಶೋಭರಾಜ್ ಪಾವೂರು

''ಶೋಭರಾಜ್ ಪಾವೂರು ತುಳುರಂಗ ಭೂಮಿಯ ಪ್ರತಿಭಾವಂತ ನಟ. ಇತ್ತೀಚೆಗೆ ತುಳು ಸಿನೆಮಾಗಳಲ್ಲೂ ನಟ, ನಿರ್ದೇಶಕರಾಗಿ ಮಿಂಚುತ್ತಿದ್ದಾರೆ.‌ ರಾಜಕೀಯವಾಗಿ ನರೇಂದ್ರ ಮೋದಿಯವರನ್ಜು ಬೆಂಬಲಿಸುತ್ತಾ ಬಂದಿದ್ದಾರೆ. ಮತ ಹಾಕಿದ್ದಾರೆ. ಅಚ್ಚರಿಯ ಸಂಗತಿಯೆಂದರೆ , ಪೆಟ್ರೋಲ್ ದರ ಏರಿಕೆಯನ್ನು ವಿರೋಧಿಸಿ ಮೋದಿ ವಿರುದ್ಧ ಒಂದು ಪೋಸ್ಟ್ ಹಾಕಿದ್ದಕ್ಕೆ ರಾತ್ರೋರಾತ್ರಿ ಅವರು ದ್ರೋಹಿ ಆಗಿಬಿಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ‌ ಅಕ್ಷರಶ ಅವರನ್ನು ಮೋದಿ ಬೆಂಬಲಿಗರು ಬೇಟೆಯಾಡುತ್ತಿದ್ದಾರೆ. ಅಸಹ್ಯ ನಿಂದನೆ, ಬೆದರಿಕೆಯ ಜೊತೆಗೆ, ಬಿಡುಗಡೆಗೆ ಸಿದ್ಧಗೊಂಡಿರುವ ಶೋಭರಾಜ್ ಪಾವೂರು ಅವರ ಹೊಸ ಸಿನೆಮಾ ಬಿಡುಗಡೆಯಾಗದಂತೆ ತಡೆಯುವ, ಬಹಿಷ್ಕರಿಸುವ ಗಂಭೀರ ಬೆದರಿಕೆ ಹಾಕಲಾಗಿದೆ.

ಇದರಿಂದ ಕಂಗೆಟ್ಟ ಶೋಭರಾಜ್ ತನ್ನ ಮೊದಲ ಪೋಸ್ಟ್ ಡಿಲೀಟ್ ಮಾಡಿ ತುಳುವಿನಲ್ಲಿ ಕ್ಷಮಾಪಣೆಯ, ಸ್ಪಷ್ಟೀಕರಣದ ಮತ್ತೊಂದು ಪೋಸ್ಟ್ ಹಾಕಿದರು. ಆದರೂ ಸಮಾಧಾನಗೊಳ್ಳದ ಮೋದಿ ಬೆಂಬಲಿಗರು ಇಡೀ ರಾತ್ರಿ ಅಲ್ಲಿಯೂ ಬೆನ್ನಟ್ಟಿ ನೂರಾರು ಎಕೌಂಟುಗಳ ಮೂಲಕ ಧಮಕಿ ಮುಂದುವರಿಸಿದರು.‌‌ ಈಗ ಶೋಭರಾಜ್ ತಮ್ಮ ಕ್ಷಮಾಪಣೆಯ ಪೋಸ್ಟನ್ನೂ‌ ಡಿಲೀಟ್ ಮಾಡಿ ಮೌನಕ್ಕೆ ಶರಣಾಗಿದ್ದಾರೆ. ತಿಂಗಳುಗಳ ಹಿಂದೆ ತುಳುನಾಡಿನ‌ ಅತ್ಯಂತ ಜನಪ್ರಿಯ ನಟ ಅರವಿಂದ ಬೋಳಾರ್ ನಕಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದಾಗಲೂ ಮೋದಿ ಅನುಯಾಯಿಗಳು ಹೀಗೆಯ ದಾಳಿ ನಡೆಸಿ ಶರಣಾಗುವಂತೆ ಮಾಡಿದ್ದರು.

ಇದು ಅತಿರೇಕ. ಬಿಜೆಪಿ, ಅದರ ಸರಕಾರ, ಪರಿವಾರದ ವಿರುದ್ದ ಸಕಾರಣಕ್ಕೆ ತುಳುನಾಡಿನ‌ ಕಲಾವಿದರು, ಬರಹಗಾರರು, ಸಾಂಸ್ಕೃತಿಕ ರಂಗದವರು ಧ್ವನಿ ಎತ್ತಬಾರದು ಎಂಬ ಈ ರೀತಿಯ ದಬ್ಬಾಳಿಕೆ ತೀರಾ ಅಪಾಯಕಾರಿ. ಇಡೀ ದೇಶದ ಇಂದಿನ‌‌ ಸ್ಥಿತಿಯ ಪ್ರತಿಬಿಂಬ. ಇಂತಹ ಗಂಭೀರ ಸಂದರ್ಭದಲ್ಲಿ ತುಳು ರಂಗಭೂಮಿ, ಸಿನೆಮಾ ರಂಗ, ಬರಹಗಾರರು, ಕಲಾವಿದರು ಶೋಭರಾಜ್ ಪಾವೂರು ಪರ ನಿಲ್ಲಬೇಕು, ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಬೇಕು‌. ಇಲ್ಲದಿದ್ದಲ್ಲಿ ಬದುಕು ಅಸಹನೀಯವಾದೀತು.''

- ಮುನೀರ್ ಕಾಟಿಪಳ್ಳ

ಶೋಭರಾಜ್ ಪಾವೂರು ತುಳುರಂಗ ಭೂಮಿಯ ಪ್ರತಿಭಾವಂತ ನಟ. ಇತ್ತೀಚೆಗೆ ತುಳು ಸಿನೆಮಾಗಳಲ್ಲೂ ನಟ, ನಿರ್ದೇಶಕರಾಗಿ ಮಿಂಚುತ್ತಿದ್ದಾರೆ.‌ ರಾಜಕೀಯವಾಗಿ...

Posted by Abdul Muneer on Tuesday, 2 February 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News