ಮೂರು ದಶಕಗಳ ಹಿಂದೆ ಸೇನೆಯಿಂದ ನಿವೃತ್ತರಾಗಿರುವ 80ರ ವಯಸ್ಸಿನ ರೈತನ ಬಂಧನ

Update: 2021-02-03 06:22 GMT

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನ ಹಿಂಸೆಗೆ ತಿರುಗಿದ್ದ ರೈತರ ಪ್ರತಿಭಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಬಂಧಿಸಿರುವ 122 ಜನರ ಪಟ್ಟಿಯಲ್ಲಿ 80ರ ವಯಸ್ಸಿನ ಗುರುಮುಖ್ ಸಿಂಗ್ ಅವರ ಹೆಸರು ಇರುವುದು ಗೊತ್ತಾಗಿ ಪಂಜಾಬ್ ನಲ್ಲಿರುವ ಅವರ ಕುಟುಂಬಿಕರು ಆಘಾತಕ್ಕೊಳಗಾಗಿದ್ದಾರೆ.

ಬಂಧಿತರಲ್ಲಿ ಅತ್ಯಂತ ಹಿರಿಯ ವಯಸ್ಸಿನ ಗುರುಮುಖ್ ರನ್ನು ಮುಖರ್ಜಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಜನವರಿ 29ರಂದು ತಮ್ಮ ಕಸ್ಟಡಿಗೆ ಪಡೆದಿದ್ದರು. ಫತೇಗಢ ಸಾಹಿಬ್ ಜಿಲ್ಲೆಯ ಶಾಮ್ಸಪುರ್ ಹಳ್ಳಿಯ ಸಣ್ಣ ರೈತನಾಗಿರುವ ಗುರುಮುಖ್  ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಗೋಧಿ ಹಾಗೂ ಭತ್ತ ಬೆಳೆಯುತ್ತಿದ್ದಾರೆ.

ರೈತರುಗಳನ್ನು ಖಲಿಸ್ತಾನಿಗಳು ಎಂದು ಪೊಲೀಸರು ಪದೇ ಪದೇ ಕರೆಯುತ್ತಿರುವ ಬಗ್ಗೆ ಗುರುಮುಖ್ ಪತ್ನಿ ಮಂಜೀತ್ ಕೌರ್ ಬೇಸರಗೊಂಡಿದ್ದಾರೆ. ಗುರುಮುಖ್ ಅವರು ಆರಂಭದಿಂದಲೇ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದರು. ಆರಂಭದಿಂದಲೂ ದಿಲ್ಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದರು. ಗುರುಮುಖ್ ಮೂರು ದಶಕಗಳ ಹಿಂದೆ ಸುಬೇದಾರ್ ಆಗಿ ಸೇನೆಯಿಂದ ನಿವೃತ್ತಿಯಾಗಿದ್ದರು. ಅವರು ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು. ಅವರು ದಿನಕ್ಕೆ ಎರಡು ಸಲ ಗುರುದ್ವಾರಕ್ಕೆ ಹೋಗುತ್ತಿದ್ದರು ಎಂದು ಹಳ್ಳಿಯ ಸರಪಂಚ ಹರ್ಪಿಂದರ್ ಸಿಂಗ್ ಹೇಳಿದ್ದಾರೆ.

ಗುರುಮುಖ್ ಅವರ ಹಿರಿಯಪುತ್ರ ಇಟಲಿಯಲ್ಲಿದ್ದಾರೆ. ಅವರ ಎರಡನೇ ಪುತ್ರ ಹಳ್ಳಿಯಲ್ಲೇ ಇದ್ದಾನೆ. ಹಿರಿಯ ಸೊಸೆ  ಹಾಗೂ ತನ್ನ ಪತ್ನಿಯೊಂದಿಗೆ ಅವರು ವಾಸಿಸುತ್ತಿದ್ದಾರೆ.

ನಮ್ಮಹಳ್ಳಿಯಲ್ಲಿ 1250 ಮತದಾರರಿದ್ದು ಎಲ್ಲರೂ ಕೃಷಿ ಕಾಯ್ದೆಗಳ ವಿರುದ್ಧ ಇದ್ದಾರೆ. ಗುರುಮುಖ್ ಬಂಧನವನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ಮತ್ತಷ್ಟು ಜನರನ್ನು ಕರೆದೊಯ್ಯಲಿದ್ದೇವೆ. ಈಗ 20ಕ್ಕೂ ಅಧಿಕ ಗ್ರಾಮಸ್ಥರು ಸಿಂಘು ಗಡಿಯಲ್ಲಿದ್ದಾರೆ ಎಂದು ಹರ್ಪಿಂದರ್ ಸಿಂಗ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News