ಬ್ರಿಟಿಷ್ ಆಡಳಿತದಲ್ಲೂ ಕೃಷಿ ಕಾನೂನುಗಳನ್ನು ಹಿಂಪಡೆಯಲಾಗಿತ್ತು: ಸಂಸತ್ತಿನಲ್ಲಿ ವಿಪಕ್ಷಗಳ ವಾದ

Update: 2021-02-03 12:13 GMT

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಇಂದು ನಡೆದ ಚರ್ಚೆಯ ವೇಳೆ ದಿಲ್ಲಿ ಗಡಿಗಳಲ್ಲಿ ರೈತರುಗಳ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ  ಪ್ರತಿಪಕ್ಷಗಳು ಒಗ್ಗಟ್ಟಿನಿಂದ ದ್ವನಿ ಎತ್ತಿವೆ.  ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇಂದು  ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಝಾದ್ ಒತ್ತಾಯಿಸಿದರು.

ಬ್ರಿಟಿಷರು ಕೂಡ ತಮ್ಮ ಆಡಳಿತದ ವೇಳೆ ಕೃಷಿ ಕಾನೂನನ್ನು ಹಿಂಪಡೆದಿದ್ದರು. ಕೇಂದ್ರ ಸರಕಾರ ಕೃಷಿ ಕಾನೂನುಗಳನ್ನು ರದ್ದುಪಡಿಸಲೇಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಆಝಾದ್ ಹೇಳಿದ್ದಾರೆ.

ಸಂಸತ್ತಿನಲ್ಲಿ 15 ಗಂಟೆಗಳ ಕಾಲ ರೈತರ ಪ್ರತಿಭಟನೆಯ ಕುರಿತು ಚರ್ಚಿಸಲು ಸರಕಾರವು ವಿಪಕ್ಷಗಳೊಂದಿನ ಮಾತುಕತೆಯ ವೇಳೆ ಒಪ್ಪಿಗೆ ನೀಡಿದೆ. ಇದೀಗ ಚರ್ಚೆಯು ರಾಜ್ಯಸಭೆಯಲ್ಲಿ ಆರಂಭವಾಗಿದ್ದು, ಎರಡು ದಿನ ಪ್ರಶ್ನೋತ್ತರ ಅವಧಿಯನ್ನುಅಮಾನತುಗೊಳಿಸಲಾಗಿದೆ.

ಚರ್ಚೆಯ ವೇಳೆ ಮಾತನಾಡಿದ ಆಝಾದ್, ಜನವರಿ 26ರ ಬಳಿಕ ನಾಪತ್ತೆಯಾದ ರೈತರ ಕುರಿತು ಸಮಿತಿ ರಚಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡರು. ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ನಡೆದಿದ್ದ ಹಿಂಸಾತ್ಮಕ ಘಟನೆಯನ್ನು ಖಂಡಿಸಿದರು. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಗಾಝಿಪುರದ ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಉಲ್ಲೇಖಿಸಿದ ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್, "ಘಾಜಿಪುರದಲ್ಲಿ ಮಾಡಲಾಗಿರುವ ಭದ್ರತಾ ವ್ಯವಸ್ಥೆ ಪಾಕಿಸ್ತಾನ ಗಡಿಯಲ್ಲಿಯೂ ಇಲ್ಲ. ನಾನು ಪಾಕಿಸ್ತಾನ ಗಡಿಯನ್ನು ನೋಡಿದ್ದೇನೆ''ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News