ಕಡಬ: ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆ ಕಾರ್ಯಾಚರಣೆಯ ವೇಳೆ ಪರಾರಿ !

Update: 2021-02-03 11:15 GMT

ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ನಾಯಿಯ ಜೊತೆ ಮನೆಯ ಶೌಚಾಲಯದಲ್ಲಿ ಬಂಧಿಯಾಗಿದ್ದ ಘಟನೆ ಬುಧವಾರ ಕಡಬದ ಕೈಕಂಬದಲ್ಲಿ ನಡೆದಿತ್ತು.

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದ್ದು, ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿ ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದ್ದು, ಈ ವೇಳೆ ಚಿರತೆಯು ನಾಯಿಯನ್ನು ಹಿಂಬಾಲಿಸಿ ಶೌಚಾಲಯದ ಒಳಗೆ ಬಂದಿದೆ. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು ಹಾಕಿದ್ದರು.

ಘಟನೆಯ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು,  ಸ್ಥಳಕ್ಕೆ ಬಂದ ಸಿಬ್ಬಂದಿ ಅರಿವಳಿಕೆ ನೀಡಿ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಚಿರತೆ ತಪ್ಪಿಸಿಕೊಂಡು ಪರಾರಿ ಆಗಿದೆ.

ಘಟನೆಗೆ ಸಂಬಂಧಿಸಿ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏರ್ ಗನ್ ಇದ್ದರೂ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅರಣ್ಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಮೃತಿ ತಪ್ಪಿಸುವ ಔಷಧ ತುಂಬಿಸುವ ಬಗ್ಗೆ ಗೊಂದಲ ಉಂಟಾಗಿತ್ತು. ಸರಿಯಾದ ವ್ಯವಸ್ಥೆ ಇಲ್ಲದೇ ಚಿರತೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು, ಚಿರತೆ ಸಿಗದೇ ತಪ್ಪಿಸಿಕೊಂಡು ಓಡಿ ಹೋಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News