ರಿಹಾನ್ನಾ, ಗ್ರೆಟಾ ಟ್ವೀಟ್‌ ಬೆನ್ನಲ್ಲೆ ಸರಕಾರವನ್ನು ಬೆಂಬಲಿಸಿ ಅಕ್ಷಯ್‌ ಕುಮಾರ್‌ ಸಹಿತ ಬಾಲಿವುಡ್‌ ತಾರೆಯರ ಟ್ವೀಟ್

Update: 2021-02-03 13:42 GMT

ಹೊಸದಿಲ್ಲಿ : ಪಾಪ್ ತಾರೆ ರಿಹಾನ್ನ, ಪರಿಸರ ಹೊರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸಹಿತ ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ ನಂತರ ಈ ಟ್ವೀಟ್‍ಗಳಿಗೆ ಆಕ್ಷೇಪಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ. ಇದೀಗ ಅದರ ಬೆನ್ನಿಗೇ ಕೇಂದ್ರ ಸಚಿವರು ಹಾಗೂ ನಟ ಅಕ್ಷಯ್ ಕುಮಾರ್ ಸಹಿತ ಹಲವು ಬಾಲಿವುಡ್ ಸೆಲೆಬ್ರಿಟಿಗಳು #ಇಂಡಿಯಾಅಗೇನ್ಸ್ಟ್ ಪ್ರೊಪಗಾಂಡ ಹಾಗೂ #ಇಂಡಿಯಾಟುಗೆದರ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲು ಪ್ರಾರಂಭಿಸಿದ್ದಾರೆ. "ಅರ್ಧಸತ್ಯಗಳ ಬದಲು ರೈತರ ಬಿಕ್ಕಟ್ಟನ್ನು ಶಮನಗೊಳಿಸಲು ಸರಕಾರ ನಡೆಸುತ್ತಿರುವ ಪ್ರಯತ್ನಗಳತ್ತ ಜನರು ಗಮನ ಹರಿಸಬೇಕು" ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್‍ಗಳು ʼದುರದೃಷ್ಟಕರʼ ಎಂದು ಬಣ್ಣಿಸಿ ಹಾಗೂ ಅವುಗಳಿಗೆ ಆಕ್ಷೇಪ ಸೂಚಿಸಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆಗೊಳಿಸಿದ ಹೇಳಿಕೆಯನ್ನೂ ಪೋಸ್ಟ್ ಮಾಡಿರುವ ನಟ ಅಕ್ಷಯ್ ಕುಮಾರ್, ಅದರ ಜತೆಗೆ ಮಾಡಿರುವ ಟ್ವೀಟ್‍ನಲ್ಲಿ "ರೈತರು ಈ ದೇಶದ ಅತ್ಯಂತ ಪ್ರಮುಖ ಭಾಗವಾಗಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ನಡೆಸುತ್ತಿರುವ ಪ್ರಯತ್ನಗಳು ನಮ್ಮ ಮುಂದಿವೆ. ಭಿನ್ನಾಭಿಪ್ರಾಯಗಳನ್ನು ಮೂಡಿಸುವವರಿಗೆ ಗಮನ ನೀಡುವ ಬದಲು ಈ ಸಮಸ್ಯೆಗೆ ಸೌಹಾರ್ದಯುತ  ಪರಿಹಾರವನ್ನು ಬೆಂಬಲಿಸೋಣ" ಎಂದು ಬರೆದಿದ್ದಾರೆ.

ಅಕ್ಷಯ್ ಹೊರತಾಗಿ ಚಿತ್ರ ನಿರ್ಮಾಪಕ ಕರಣ್ ಜೋಹರ್, ನಟರಾದ ಅಜಯ್ ದೇವಗನ್ ಹಾಗೂ ಸುನಿಲ್ ಶೆಟ್ಟಿ ಕೂಡ ಟ್ವೀಟ್ ಮಾಡಿ ಸರಕಾರದ ಬೆಂಬಲಕ್ಕೆ ನಿಂತಿದ್ದಾರೆ. "ಭಾರತ ಮತ್ತು ಭಾರತದ ನೀತಿಗಳ ವಿರುದ್ಧ ಸುಳ್ಳು ಪ್ರಚಾರಗಳಿಗೆ ಬಲಿ ಬೀಳಬೇಡಿ. ಯಾವುದೇ ಒಳಜಗಳವಿಲ್ಲದೆ ಈ ಸಮಯ ನಾವು ಒಗ್ಗಟ್ಟಿನಿಂದಿರಬೇಕಿದೆ" ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

"ಈ ಸಮಯ ನಾವು ತಾಳ್ಮೆಯಿಂದಿರುವುದು ಅಗತ್ಯ. ಎಲ್ಲರಿಗೂ ಸಮಾಧಾನ ತರುವಂತಹ ಪರಿಹಾರಕ್ಕಾಗಿ ನಾವು ಶ್ರಮಿಸೋಣ. ರೈತರು ನಮ್ಮ ದೇಶದ ಬೆನ್ನೆಲುಬು, ನಮ್ಮನ್ನು ವಿಭಜಿಸಲು ಯತ್ನಿಸಲು ಯಾರಿಗೂ ಆಸ್ಪದ ನೀಡದೇ ಇರೋಣ" ಎಂದು ಕರಣ್ ಜೋಹರ್ ಬರೆದಿದ್ದಾರೆ.

"ನಾವು ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು, ಅರ್ಧ ಸತ್ಯಕ್ಕಿಂತ ಹೆಚ್ಚು ಅಪಾಯಕಾರಿ ಬೇರೆ ಯಾವುದೂ ಇಲ್ಲ" ಎಂದು ಸುನೀಲ್ ಶೆಟ್ಟಿ ಬರೆದಿದ್ದಾರೆ. ಈ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಹಿತ ಹಲವು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.

"ಅರಾಜಕತೆ ಪ್ರಿಯ ಅಂತಾರಾಷ್ಟ್ರೀಯ ಗ್ಯಾಂಗ್‍ನಿಂದ ನಾವು  ಬೆದರುವುದಿಲ್ಲ. ಗಣರಾಜ್ಯೊತ್ಸವ ದಿನದಂದು ಅವರು ಹೀಗೆ ಹಿಂಸೆ ನಡೆಸಿದರು ಹಾಗೂ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನಿಸಿದರು ಎಂದು ನೋಡಿದ್ದೇವೆ.  ನಾವೀಗ ಒಗ್ಗಟ್ಟಾಗಿ ಈ ಶಕ್ತಿಗಳನ್ನು ಸೋಲಿಸೋಣ" ಎಂದು ಕೇಂದ್ರ ಗೃಹ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಬರೆದಿದ್ದಾರೆ.

ಇದುವರೆಗೂ ರೈತರ ಕುರಿತಾದಂತೆ ಒಂದೂ ಮಾತನ್ನಾಡದ ಭಾರತೀಯ ಚಿತ್ರರಂಗದ ಗಣ್ಯರು ಏಕಾಏಕಿ ಸರಕಾರದ ಪರ ಮಾತನಾಡುತ್ತಿರುವುದು ವ್ಯಾಪಕ ವ್ಯಂಗ್ಯಕ್ಕೆ ಕಾರಣವಾಗಿದೆ. "ಅಕ್ಷಯ್‌ ಕುಮಾರ್‌, ಸುನೀಲ್‌ ಶೆಟ್ಟಿ ಮತ್ತು ಅಜಯ್‌ ದೇವಗನ್‌ ರಿಗೆ ಧನ್ಯವಾದಗಳು, ನಿಮ್ಮ ಖಾತೆಗೆ 2ರೂ. ಜಮೆಯಾಗಿದೆ" ಎಂದು ಸಾಮಾಜಿಕ ಕಾರ್ಯಕರ್ತ ಧ್ರುವ್‌ ರಾಠೀ ಟ್ವೀಟ್‌ ಮಾಡಿದ್ದಾರೆ. "ಇದು ಸರಕಾರದ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಒಂದು ಪ್ರಯತ್ನವಷ್ಟೇ ಎಂದು ಇನ್ನೋರ್ವ ಬಳಕೆದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News