×
Ad

ಮಣಿಪಾಲದಲ್ಲಿ ಒಂದೇ ತಿಂಗಳಲ್ಲಿ 51 ಕರ್ಕಶ ಸೈಲೆನ್ಸರ್ ವಶ

Update: 2021-02-03 21:45 IST

ಉಡುಪಿ, ಫೆ. 3: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಮಾರ್ಪಡಿಸಲಾದ ಬೈಕ್ ಹಾಗೂ ಕಾರುಗಳ ಕರ್ಕಶ ಶಬ್ದ ಮಾಡುವ 51 ಸೈಲೆನ್ಸರ್‌ಗಳನ್ನು ಪೊಲೀಸರು ವಶಪಡಿಸಿಕೊಂಡು 25,500ರೂ. ದಂಡ ವಸೂಲಿ ಮಾಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಇಂದು ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ‘ಸಡಕ್ ಸುರಕ್ಷಾ- ಜೀವನ್ ರಕ್ಷ’ ಎಂಬ ಧ್ಯೇಯದೊಂದಿಗೆ ರಸ್ತೆ ಸುರಕ್ಷತಾ ಮಾಸವನ್ನು ಮಣಿಪಾಲ ಪೊಲೀಸರು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಈ ಬಾರಿ ಶಬ್ದ ಮಾಲಿನ್ಯ ಮಾಡುವ ದ್ವಿಚಕ್ರ ಮತ್ತು ಕಾರುಗಳ ವಿರುದ್ಧ ಪ್ರಕರಣ ಗಳನ್ನು ದಾಖಲಿಸಿದ್ದಾರೆ ಎಂದರು.

ಜ.1ರಿಂದ 31ರವರೆಗೆ ಮಣಿಪಾಲ ಪೊಲೀಸರು 50 ದ್ವಿಚಕ್ರ ವಾಹನದ ಸವಾರರು ಹಾಗೂ ಒಬ್ಬ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ 51 ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸೈಲೆನ್ಸರ್‌ಗಳನ್ನು ವಾಹನ, ಸವಾರರಿಗೆ ವಾಪಾಸ್ಸು ನೀಡಿದರೆ ಅವರು ಮರುಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಪ್ರಾಯೋಗಿಕವಾಗಿ ಈ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಮೂಲಕ ಅನುಪಯುಕ್ತ ಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

2000 ರೂ.ವರೆಗೆ ದಂಡ: ಮೋಟಾರ್ ವಾಹನಗಳ ನಿಯಮಗಳ ಪ್ರಕಾರ ಸೈಲೆನ್ಸರ್‌ನಿಂದ ಹೊರ ಸೂಸುವ ಶಬ್ದವು ಇಂತಿಷ್ಟೆ ಪರಿಮಾಣದಲ್ಲಿ ಇರಬೇಕು ಎಂದು ರಾಷ್ಟ್ರೀಯ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಸಾಮಾನ್ಯವಾಗಿ 80 ಡಿಸಿಬೆಲ್ ಗಿಂತ ಹೆಚ್ಚಿನ ಶಬ್ದವನ್ನು ಸೈಲೆನ್ಸರ್ ‌ಗಳು ಹೊರಸೂಸಿದರೆ ಅದು ಶಬ್ದ ಮಾಲಿನ್ಯ ವಾಗುತ್ತದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದರು.

ದ್ವಿಚಕ್ರ ವಾಹನ ಸವಾರರು ವಾಹನ ತಯಾರಿಕೆ ಕಂಪೆನಿಯಿಂದ ಬರುವ ಸೈಲೆನ್ಸರ್‌ಗಳನ್ನು ಸ್ಥಳೀಯವಾಗಿ ಬದಲಾಯಿಸಿ ಮಾರ್ಪಡುಗೊಳಿಸಿದ ಸೈಲೆನ್ಸರ್‌ಗಳನ್ನು ಆಳವಡಿಸಿ ಶಬ್ದ ಮಾಲಿನ್ಯ ಮಾಡುತ್ತಿದ್ದಾರೆ. ಈ ರೀತಿ ಮಾರ್ಪಡುಗಳಿಗೆ 500ರೂ.ನಿಂದ 2000ರೂ.ವರೆಗೆ ದಂಡ ವಸೂಲಿ ಮಾಡಲು ಮತ್ತು ಮಾರ್ಪಡುಗೊಂಡ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳಲು ಅವಕಾಶ ಇದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಸದಾನಂದ ನಾಯಕ್, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ ವಂದಲಿ, ಸುಧಾಕರ ತೋನ್ಸೆ, ಪ್ರೊಬೆಶನರಿ ಎಸ್ಸೈಗಳಾದ ನಿರಂಜನ್ ಗೌಡ, ದೇವರಾಜ ಬಿರಾದಾರ ಮೊದಲಾದವರು ಹಾಜರಿದ್ದರು.

ಟ್ರೇಡ್ ಲೈಸೆನ್ಸ್ ರದ್ದು: ಎಸ್ಪಿ 

ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ರೀತಿಯಾಗಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿ ಯೆಯನ್ನು ಎಲ್ಲ ಠಾಣೆಗಳಲ್ಲಿಯೂ ಮಾಡಲಾಗುವುದು. ಅಲ್ಲದೆ ಈ ರೀತಿ ಸೈಲೆನ್ಸರ್‌ಗಳನ್ನು ಅಳವಡಿಸುವವರು ಮತ್ತು ಮಾರಾಟ ಮಾಡುವವರ ಟ್ರೇಡ್ ಲೈಸೆನ್ಸ್ ರದ್ದು ಗೊಳಿಸುವಂತೆ ನಗರಸಭೆಗೆ ಪತ್ರ ಬರೆಯಲಾಗುವುದು. ಅಲ್ಲದೆ ಶೋರೂಮ್ ಗಳಿಗೂ ಈ ಕುರಿತು ನೋಟೀಸ್ ಜಾರಿ ಮಾಡಲಾಗುವುದು ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News