×
Ad

ಭರದಿಂದ ಸಾಗುತ್ತಿರುವ ಮೂಲರಪಟ್ಣ ಹೊಸ ಸೇತುವೆ ಕಾಮಗಾರಿ

Update: 2021-02-03 22:33 IST

ಮಂಗಳೂರು, ಫೆ.3: ಎರಡುವರೆ ವರ್ಷದ ಹಿಂದೆ ಕುಸಿದು ಬಿದ್ದಿದ್ದ ಮೂಲರಪಟ್ಣ ಸೇತುವೆಯ ಫಲ್ಗುಣಿ ನದಿಯ ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಸಂಪರ್ಕ ಕೊಂಡಿಯಾಗಿದ್ದ ಸುಮಾರು 50 ವರ್ಷ ಹಳೆಯದಾದ ಈ ಸೇತುವೆಯು 2018ರ ಜೂನ್ 25ರಂದು ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿತ್ತು.

ಮಂಗಳೂರಿನಿಂದ ಗಂಜಿಮಠ, ಕುಪ್ಪೆಪದವು ಮೂಲಕ ಬಂಟ್ವಾಳದತ್ತ ಸಾಗಲು ಇದು ಮುಖ್ಯ ಸೇತುವೆ-ರಸ್ತೆಯಾಗಿತ್ತು. ಸೇತುವೆ ಕುಸಿದ ಬಳಿಕ ಈ ಭಾಗದ ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತಲ್ಲದೆ ಮೂಲರಪಟ್ಣದಿಂದ ಮಂಗಳೂರು ಅಥವಾ ಬಂಟ್ವಾಳದ ಕಡೆಗೆ ತೆರಳಲು ಸಾಕಷ್ಟು ದೂರ ನಡೆದುಕೊಂಡು ಹೋಗಬೇಕಿತ್ತು. ಕಳೆದ ಎರಡೂವರೆ ವರ್ಷದಿಂದ ಈ ಭಾಗದ ಪ್ರಯಾಣಿಕರು, ಅದರಲ್ಲೂ ಮುಖ್ಯವಾಗಿ ಕೂಲಿ ಕಾರ್ಮಿಕರು ಪಟ್ಟಪಾಡು ಅಷ್ಟಿಷ್ಟಲ್ಲ. ಮಂಗಳೂರಿನಿಂದ ಗಂಜಿಮಠ ಅಥವಾ ಕುಪ್ಪೆಪದವು ಮೂಲಕ ಮೂಲರಪಟ್ಣಕ್ಕೆ ಸಾಗುವ ಬಸ್‌ಗಳು ಮುತ್ತೂರು ಶಾಲೆಯಾಗಿ ಮೂಲರಪಟ್ಣ ತೂಗು ಸೇತುವೆಯವರೆಗೆ ಹೋಗುತ್ತವೆ. ಅಲ್ಲಿಂದ ಮುಂದಕ್ಕೆ ಮೂಲರಪಟ್ಣ ಮಸೀದಿಯತ್ತ ಅಥವಾ ಬಿಸಿ ರೋಡ್-ಬಂಟ್ವಾಳಕ್ಕೆ ಹೋಗಬೇಕಿದ್ದರೆ ಇತರ ವಾಹನ ಹತ್ತಬೇಕು. ಈ ಹಿಂದೆ ಇಲ್ಲಿ ಎರಡು ಸರಕಾರಿ ಬಸ್ ಓಡಾಡುತ್ತಿತ್ತು. ಇದೀಗ ಕೇವಲ ಒಂದು ಮಾತ್ರ ಚಲಿಸುತ್ತಿವೆ. ಹಾಗಾಗಿ ಸಾರ್ವಜನಿಕರು ಹೆಚ್ಚಾಗಿ ರಿಕ್ಷಾ ಮತ್ತಿತರ ಖಾಸಗಿ ಬಾಡಿಗೆ ವಾಹನ ಹತ್ತುವುದು ಅನಿವಾರ್ಯವಾಗಿದೆ.

2018ರ ಜೂನ್‌ನಲ್ಲಿ ಕುಸಿದ ಮೂಲರಪಟ್ಣ ಸೇತುವೆಯ ಕಾಮಗಾರಿಯು 2019ರ ಡಿಸೆಂಬರ್‌ನಲ್ಲಿ ಆರಂಭಗೊಂಡಿದೆ. 13 ಕೋ.ರೂ. ವೆಚ್ಚದ ಈ ಕಾಮಗಾರಿಯ ಪೈಕಿ ಶೇ 45ರಷ್ಟು ಕೆಲಸ ಆಗಿದೆ. ಪಿಲ್ಲರ್ ನಿರ್ಮಾಣ ಕಾರ್ಯವು ಭರದಿಂದ ಸಾಗಿದ್ದು, ಸೇತುವೆಗೆ ಅಗತ್ಯವಿರುವ ಗರ್ಡರ್‌ಗಳನ್ನು ಸ್ಥಳದಲ್ಲೇ ನಿರ್ಮಿಸಲಾಗುತ್ತಿದೆ. ಗುರುಪುರದಲ್ಲಿ ಹೊಸ ಸೇತುವೆ ನಿರ್ಮಿಸಿದ ಕಾವೂರಿನ ಮೊಗ್ರೋಡಿ ಕನ್‌ಸ್ಟ್ರಕ್ಶನ್ ಕಂಪೆನಿಯಿಂದಲೇ ಮೂಲರಪಟ್ಣ ಸೇತುವೆಯೂ ನಿರ್ಮಾಣಗೊಳ್ಳುತ್ತಿದೆ.

ಹೊಸ ಸೇತುವೆಗೆ 30 ಮೀಟರ್ ಉದ್ದದ ಗರ್ಡರ್ ಬಳಕೆಯಾಗಲಿದ್ದು, ಆರು ಸ್ಪ್ಯಾನ್‌ಗಳಲ್ಲಿ ತಲಾ 4 ಗರ್ಡರ್‌ಗಳಿರುತ್ತವೆ. ಸೇತುವೆಯ ಎರಡು ಪಾರ್ಶ್ವಗಳ ಎರಡು ಕೊನೆಯ ಕಂಬಗಳ ಸಹಿತ 7 ಕಂಬ (ಪಿಲ್ಲರ್) ಇದೆ. ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ 28 ಮೀಟರ್ ಅಂತರ ವಿರುತ್ತದೆ. ಒಂದೂವರೆ ಮೀಟರ್ ಕ್ಯಾರಿಯೇಜ್ ಹಾಗೂ ಏಳೂವರೆ ಮೀಟರ್ ಅಗಲಕ್ಕೆ ಸೇತುವೆ ರಸ್ತೆ ಒಳಗೊಂಡಿರುತ್ತದೆ.

‘ಸೇತುವೆ ಮುರಿದು ಬಿದ್ದ ಬಳಿಕ ಈ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಶಾಸಕರಾದ ಭರತ್ ಶೆಟ್ಟಿ ಮತ್ತು ರಾಜೇಶ್ ನಾಯಕ್ ಮತ್ತಿತರ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ. ಎರಡು ಮಳೆಗಾಲ ಕಳೆದರೂ ಸೇತುವೆ ಪೂರ್ಣಗೊಂಡಿಲ್ಲ. ಮುಂದಿನ ಮಳೆಗಾಲದ ವೇಳೆ ಹೊಸ ಸೇತುವೆ ನಿರ್ಮಾಣವಾಗಬಹುದೇನೋ?’ ಎಂದು ಮೂಲರಪಟ್ಣದ ನಿವಾಸಿ ಪ್ರವೀಣ್ ಬಂಗೇರ ಅಭಿಪ್ರಾಯ ಪಡುತ್ತಾರೆ.

ಗುರುಪುರದಲ್ಲಿ ನಿರ್ಮಿಸಲಾದ ಸೇತುವೆಯ ಮಾದರಿಯಲ್ಲೇ ಇದು ನಿರ್ಮಾಣಗೊಳ್ಳುತ್ತದೆ. ಈಗಾಗಲೆ ಕಾಮಗಾರಿಯು ಭರದಿಂದ ಸಾಗುತ್ತಿದೆ. ಗುರುಪುರ ಸೇತುವೆಯ ಎರಡೂ ಪಾರ್ಶ್ವದಲ್ಲಿ ಪಾದಚಾರಿಗಳಿಗೆ ಕಾಲುದಾರಿ ವ್ಯವಸ್ಥೆ ಇದ್ದರೆ ಇಲ್ಲಿ ಒಂದು ಪಾಶ್ವದಲ್ಲಿ ಮಾತ್ರ ಕಾಲುದಾರಿ ನಿರ್ಮಿಸಲಾಗುತ್ತದೆ. ಈ ವರ್ಷದ ಜುಲೈಗೆ ಹೊಸ ಸೇತುವೆಯಲ್ಲಿ ಸಾಮಾನ್ಯ ವಾಹನ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಕಾಮಗಾರಿ ಮುಗಿ ಯುವ ಸಾಧ್ಯತೆ ಇದೆ ಎಂದು ಮೊಗ್ರಾಡಿ ಕಂಪೆನಿಯ ಮುಖ್ಯ ಇಂಜಿನಿಯರ್ ದಾಮೋದರ್ ಎಂಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News