×
Ad

ಪಚ್ಚನಾಡಿ ಸಂತ್ರಸ್ತರಿಗೆ ಶೀಘ್ರ ಮಧ್ಯಂತರ ಪರಿಹಾರ: ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2021-02-03 22:35 IST

ಮಂಗಳೂರು, ಫೆ.3: ಪಚ್ಚನಾಡಿ ಘನತ್ಯಾಜ್ಯ ಲ್ಯಾಂಡ್‌ಫಿಲ್ ಘಟಕದ ತ್ಯಾಜ್ಯ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಚ್ಚನಾಡಿ ಘನತ್ಯಾಜ್ಯ ಲ್ಯಾಂಡ್‌ಫಿಲ್ ಘಟಕದ ತ್ಯಾಜ್ಯ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತ ಅವರು ಮಾತನಾಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನ ತ್ಯಾಜ್ಯ, ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತದಿಂದ ಸಂತ್ರಸ್ತರು ತಮಗಾದ ನಷ್ಟದ ಬಗ್ಗೆ ಪರಿಹಾರದ ಕುರಿತು ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಪರಿಶೀಲಿಸಿ, ಮಧ್ಯಂತರ ಪರಿಹಾರವನ್ನು ಕೂಡಲೇ ನೀಡಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಚ್ಚನಾಡಿ ಘನತ್ಯಾಜ್ಯ ಲ್ಯಾಂಡ್‌ಫಿಲ್ ಘಟಕದ ತ್ಯಾಜ್ಯ ಕುಸಿತದಿಂದ ಪರಿಹಾರ ಕೋರಿದ ಅರ್ಜಿಯಲ್ಲಿ ತಮ್ಮ ಬೆಳೆಗಾದ ನಷ್ಟ, ಮರಗಳಿಗಾದ ನಷ್ಟ, ಮನೆಹಾನಿ, ಜಮೀನು ಮುಚ್ಚಿ ಹೋಗಿರುವುದರಿಂದ ಆದ ನಷ್ಟ ಅಲ್ಲದೇ ಮತ್ತಿತರ ಯಾವುದೇ ರೀತಿಯ ನಷ್ಟದ ಬಗ್ಗೆ ನಿಖರವಾಗಿ ದಾಖಲೆ ಗಳೊಂದಿಗೆ ಅರ್ಜಿ ಸಲ್ಲಿಸಿದಾಗ ಮಹಾನಗರ ಪಾಲಿಕೆ ಪರಿಹಾರವನ್ನು ಅವುಗಳ ಆಧಾರದ ಮೇಲೆ ನೀಡಲು ಅನುಕೂಲವಾಗುತ್ತದೆ ಎಂದರು.

ಅನಾಹುತದಿಂದ ಕೆಲವು ರಸ್ತೆಗಳು, ಕುಡಿಯುವ ನೀರಿನ ಬಾವಿಗಳು ಹಾಗೂ ವಸತಿ ಸಮುಚ್ಛಯಗಳು ಮುಚ್ಚಿಹೋಗಿ ಸ್ಥಳೀಯ ನಾಗರೀಕರಿಗೆ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳನ್ನು ಜಿಲ್ಲಾಧಿಕಾರಿ ಆಲಿಸಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕುಡಿಯುವ ನೀರು, ರಸ್ತೆ, ವಿದ್ಯುಚ್ಛಕ್ತಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಅಲ್ಲಿನ ಜನರಿಗೆ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಂತ್ರಸ್ತರು ತಮಗಾದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗೆ ತಿಳಿಸಿ, ಅವುಗಳನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಜಿ. ಶಿಲ್ಪಾ, ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News