ಜಮ್ಮುಕಾಶ್ಮೀರದ ರಾಜ್ಯ ಸ್ಥಾನಮಾನ ಮರು ಸ್ಥಾಪಿಸಲು ಮಸೂದೆ ಮಂಡಿಸಿ: ಕೇಂದ್ರ ಸರಕಾರಕ್ಕೆ ಗುಲಾಂ ನಬಿ ಆಝಾದ್ ಮನವಿ

Update: 2021-02-03 19:05 GMT

ಹೊಸದಿಲ್ಲಿ, ಫೆ. 4: ಜಮ್ಮು ಹಾಗೂ ಕಾಶ್ಮೀರದ ರಾಜ್ಯ ಸ್ಥಾನಮಾನ ಮರು ಸ್ಥಾಪಿಸಲು ರಾಜ್ಯ ಸಭೆಯಲ್ಲಿ ಮಸೂದೆ ಮಂಡಿಸುವಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಬುಧವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

 ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿಲುವಳಿ ಸಲ್ಲಿಸುವ ಸಂದರ್ಭ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಆಝಾದ್, ಜಮ್ಮು ಹಾಗೂ ಕಾಶ್ಮೀರ ಪ್ರಗತಿಯಾಗಬೇಕಾದರೆ, ಗಡಿಯಲ್ಲಿ ನಮ್ಮ ಶತ್ರುಗಳ ವಿರುದ್ಧ ಹೋರಾಡಬೇಕಾದರೆ ನಾವು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಅವರ ಬಗ್ಗೆ ಪ್ರೀತಿ ತೋರಿಸಬೇಕು ಎಂದಿದ್ದಾರೆ.

ಕೇಂದ್ರ ಸರಕಾರ ಸದನದಲ್ಲಿ ಮಸೂದೆ ಮಂಡಿಸಬೇಕು ಹಾಗೂ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸಬೇಕು ಎಂದು ಹೇಳಿದ ಅವರು, ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿದ ಬಳಿಕ ವಿಧಾನ ಸಭೆ ಚುನಾವಣೆ ನಡೆಸಬೇಕು ಎಂದಿದ್ದಾರೆ.

ಜಮ್ಮು ಕಾಶ್ಮೀರ, ಲಡಾಖ್ ಹಾಗೂ ಪಂಜಾಬ್ ಸೇರಿದಂತೆ ಈಶಾನ್ಯ ಹಾಗೂ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಸಮಾಧಾನಗೊಳ್ಳುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಹೇಳಿದರು.

ಈ ಹಿಂದಿಗಿಂತ ಭಿನ್ನವಾಗಿ ಹೊರಗಿನವರು ತಮ್ಮ ಭೂಮಿ ಖರೀದಿಸಲು ಹಾಗೂ ಇಲ್ಲಿ ಕೆಲಸ ಮಾಡಲು ಸಾಧ್ಯವಾಗುವುದರಿಂದ ಜಮ್ಮುಕಾಶ್ಮೀರ ಹಾಗೂ ಲಡಾಕ್‌ನ ಜನರು ಅಸಮಾಧಾನಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಇಂದಿಗೆ ಹೋಲಿಸಿದರೆ ರಾಜ್ಯವಾಗಿರುವಾಗ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ 100 ಪಟ್ಟು ಉತ್ತಮವಾಗಿತ್ತು. ಭಯೋತ್ಪಾದನೆ ಕಡಿಮೆ ಇತ್ತು. ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಇದ್ದರೂ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆಯುತ್ತಿತ್ತು ಎಂದು ಗುಲಾಂ ನಬಿ ಆಝಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News