ಗಂಗೊಳ್ಳಿ: ಕಸದಿಂದ ತುಂಬುತ್ತಿದೆ ಮಡಿವಾಳ ಕೆರೆ

Update: 2021-02-04 12:00 GMT

ಗಂಗೊಳ್ಳಿ, ಫೆ.4: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಿವಾಳ ಕೆರೆ ಈಗ ಊರಿನ ಕಸದಿಂದ ತುಂಬುತ್ತಿದೆ. ಇದು ಈ ಭಾಗದ ಜನರಿಗೆ ಅನೇಕ ರೀತಿಯಲ್ಲಿ ತೊಂದರೆ ಹಾಗೂ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಅದರಲ್ಲೂ ಈ ಕೆರೆಯ ಪಕ್ಕದಲ್ಲೆ ಸ್ಟೆಲ್ಲಾ ಮೇರಿಸ್ ಶಾಲೆಯ ಆಟದ ಮೈದಾನವೂ ಇದ್ದು, ಶಾಲೆಯ ಮಕ್ಕಳಿಗೆ ಇದರಿಂದ ಆಟವಾಡಲು ತೊಂದರೆಯಾಗುತ್ತಿದೆ.

ಕೆರೆಗೆ ತಂದೆಸೆಯುವ ಕಸದ ರಾಶಿ ದಿನದಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಸದ ರಾಶಿ ಈಗ ವಿಷದ ರಾಶಿಯಾಗುತ್ತಿದೆ. ಜನರು ಮತ್ತು ಮಕ್ಕಳು ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಇದನ್ನು ಹಲವು ಬಾರಿ ಸ್ಥಳೀಯ ಗ್ರಾಮಪಂಚಾಯತ್ನ ಗಮನಕ್ಕೆ ತಂದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಮಡಿವಾಳ ಕೆರೆಯನ್ನು ದುರಸ್ಥಿಗೊಳಿಸುವುದರ ಮೂಲಕ ಇಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಕೆರೆಯಲ್ಲಿರುವ ನೀರಿಗೆ ಕಸ ಸೇರುತ್ತಿದ್ದು, ಜಲಮೂಲ ಕಲುಷಿತಗೊಳ್ಳುತ್ತಿದೆ. ಆಸುಪಾಸಿನ ಕೋಳಿ ತ್ಯಾಜ್ಯವನ್ನು ಈ ಕೆರೆಗೆ ತಂದು ಹಾಕಲಾಗುತ್ತಿದೆ. ಈ ತ್ಯಾಜ್ಯವನ್ನು ತಿನ್ನಲು ಬೀದಿ ನಾಯಿಗಳು ಮುಗಿ ಬೀಳುತ್ತಿವೆ. ನಾಯಿಗಳ ಹಾವಳಿಯಿಂದಾಗಿ ಈ ಭಾಗದಲ್ಲಿ ಮಕ್ಕಳು, ವೃದ್ಧರು ಸಂಚರಿಸಲು ಭಯ ಪಡು ವಂತಾಗಿದೆ. ಕಸದ ರಾಶಿಯಿಂದಾಗಿ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ರೋಗಗಳ ಭೀತಿಯಲ್ಲಿ ಮಕ್ಕಳು ಮತ್ತು ಜನರು ವಾಸ ಮಾಡುವಂತಾಗಿದೆ.

‘ಕಸ ಮುಕ್ತ ಗ್ರಾಮ’ ಮತ್ತು ‘ಸ್ವಚ್ಛ ನಗರ’ದಂತಹ ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತವಾಗಿವೆ. ಗ್ರಾಮದ ನೂರಾರು ಟನ್ ಕಸವನ್ನು ರಾತ್ರೋರಾತ್ರಿ ಕದ್ದುಮುಚ್ಚಿ ಸಮೀಪದ ಗ್ರಾಮಗಳ ಸುತ್ತಮುತ್ತ ಸುರಿದು ಹೋಗುವ ಪರಿಪಾಟಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ಕಸದ ರಾಶಿಯಿಂದ ಹೊರಹೊಮ್ಮುವ ಅಸಾಧ್ಯ ದುರ್ವಾಸನೆ ಮತ್ತು ಅದರಿಂದ ಹರಡುವ ರೋಗರುಜಿನಗಳೊಂದಿಗೆ ಜನರು ಅದರಲ್ಲೂ ಮಕ್ಕಳು ಬದುಕಬೇಕಾಗಿದೆ.

ಗಂಗೊಳ್ಳಿ ಗ್ರಾಮ ಪಂಚಾಯಿತಿ ಗ್ರಾಮದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ವಿಫಲವಾಗಿದೆ. ಗ್ರಾಪಂ ಗ್ರಾಮದ ನೈರ್ಮಲ್ಯ ಕಾಪಾಡಲು ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News