×
Ad

ಉದ್ಯಾವರ: ಏಳನೇ ಶತಮಾನದ ಆಳುಪರ ಕಾಲದ ಶಾಸನ ಪತ್ತೆ

Update: 2021-02-04 17:37 IST

ಉಡುಪಿ, ಫೆ.4: ಉದ್ಯಾವರದ ಕಲ್ಸಂಕ ಎಂಬ ಪ್ರದೇಶದಲ್ಲಿ ನಾರಾಯಣ ಪೂಜಾರಿ ಎಂಬವರ ಜಾಗದಲ್ಲಿ ನಡೆಸಲಾದ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಏಳನೇ ಶತಮಾನದ ಅಳುಪರ ಕಾಲದ ಶಾಸನವೊಂದು ಪತ್ತೆಯಾಗಿದೆ.

ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಅಲ್ವಿನ್ ಅಂದ್ರಾದೆ ಈ ಶಾಸನವನ್ನು ಪತ್ತೆ ಮಾಡಿದ್ದಾರೆ. ಈ ಶಾಸನವನ್ನು ಪರಿಶೀಲಿಸಿದ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ, ಇದು 7ನೇ ಶತಮಾನದ ಆಳುಪರ ಶಾಸನವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಅಗ್ನಿ ಶಿಲೆಯಿಂದ ಕೊರೆಯಲ್ಪಟ್ಟ ಈ ಶಾಸನವು 3 ಅಡಿ ಎತ್ತರವನ್ನು ಹೊಂದಿದ್ದು, ಶಿಲೆಯ ಎರಡು ಭಾಗದಲ್ಲಿ ಶಾಸನವನ್ನು ಬರೆಯಲಾಗಿದೆ. ಶಾಸನದ ಒಂದು ಮಗ್ಗುಲಲ್ಲಿ 5 ಸಾಲುಗಳಿದ್ದು, ಇನ್ನೊಂದು ಮಗ್ಗುಲಲ್ಲಿ 6 ಸಾಲುಗಳಿವೆ. 7ನೆ ಶತಮಾನದ ಕನ್ನಡ ಲಿಪಿ ಮತ್ತು ಕನ್ನಡ ಭಾಷೆ ಯಲ್ಲಿರುವ ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಕೊನೆಯಲ್ಲಿ ‘ನಿರಿದ ಕಲ್ಲು’ ಎಂಬ ಉಲ್ಲೇಖವಿದೆ. ಹಾಗಾಗಿ ಈ ಶಾಸನವನ್ನು ಯಾವುದೋ ಘಟನೆಯ ನೆನಪಿಗಾಗಿ ಹಾಕಿರಬಹುದೆಂದು ಮತ್ತು ಈ ಶಾಸನದ ಹೆಚ್ಚಿನ ಅಧ್ಯಯನವನ್ನು ಮಾಡಲಾಗುವುದು ಎಂದು ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.

ಈ ಕ್ಷೇತ್ರ ಕಾರ್ಯ ಶೋಧನೆಯ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೇಬೆಟ್ಟು ಹಾಗೂ ಮಂಜುನಾಥ ಆಚಾರ್ಯ ಪಳ್ಳಿ ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News