ಮಂಗಳೂರು: ಆರೋಪಿಗಳ ಕಾರನ್ನು ಮಾರಾಟ ಮಾಡಿದ ಸಿಸಿಬಿ ಪೋಲಿಸರು; ಆರೋಪ
ಮಂಗಳೂರು, ಫೆ.4: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಆರೋಪಿಗಳ ಐಷಾರಾಮಿ ಕಾರು ಸಿಸಿಬಿ ಪೊಲೀಸರೇ ಮಾರಾಟ ಮಾಡಿದ ಆರೋಪ ಕುರಿತು ಆಂತರಿಕ ತನಿಖೆಯನ್ನು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಅವರಿಗೆ ಜವಾಬ್ದಾರಿ ಹೊರಿಸಲಾಗಿದೆ.
ಐಷಾರಾಮಿ ಕಾರು ಮಾರಾಟ ಮಾಡಿದ ಆರೋಪವು ಬೆಳಕಿಗೆ ಬರುತ್ತಿದ್ದಂತೆಯೇ ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಕೂಡಲೇ ಈ ಪ್ರಕರಣವನ್ನು ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಗಾಂವ್ಕರ್ ಅವರಿಗೆ ಸೂಚನೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೊದಲ ಹಂತದ ವರದಿಯನ್ನು ಮೂರು ದಿನದೊಳಗೆ ನೀಡಿ ಬಳಿಕ ಕಮಿಷನರ್ ಅವರ ಮಾರ್ಗದರ್ಶನದಂತೆ ಪ್ರಕರಣದ ಹೆಚ್ಚುವರಿ ವರದಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ ?
ಸಿಸಿಬಿ ಪೊಲೀಸರ ವಶದಲ್ಲಿದ್ದ ಹಾಗೂ ಆರೋಪಿಗಳಿಗೆ ಸೇರಿದ ಕಾರನ್ನು ಸಿಸಿಬಿ ಪೊಲೀಸರೇ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಘಟನೆಯ ಕುರಿತಾಗಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತನಿಖೆಗೆ ಸೂಚಿಸಿದ್ದರು. ಘಟನೆಯ ಸತ್ಯಾಸತ್ಯತೆ, ಹಿನ್ನೆಲೆಯನ್ನು ತಿಳಿಯಲು ಈಗಾಗಲೇ ಆಯುಕ್ತರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸದ್ಯ ಪ್ರಕರಣದ ತನಿಖೆಗೆ ಡಿಸಿಪಿ ವಿನಯ್ ಗಾಂವ್ಕರ್‌ಗೆ ವಹಿಸಲಾಗಿದೆ.
ವಂಚನಾ ತನಿಖೆ ಚುರುಕು
ಕೇರಳ ಮೂಲದ ಆರೋಪಿಗಳ ವಂಚನಾ ಪ್ರಕರಣವನ್ನು ನಗರ ನಾರ್ಕೊಟಿಕ್ ಆ್ಯಂಡ್ ಎಕಾನಾಮಿಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ನಡೆಸುತ್ತಿದ್ದಾರೆ. ವಂಚನೆ ಪ್ರಕರಣ, ಸೀಝ್ ಮಾಡಿರುವ ಕಾರುಗಳ ವಿವರ ಸೇರಿದಂತೆ ಪ್ರತಿಯೊಂದು ಸೂಕ್ಷ್ಮದ ಬಗ್ಗೆ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.