‘ಗಂಗಾನದಿ'ಯಂತೆ ಕಾವೇರಿ ಮಲಿನ ಆಗದಿರಲಿ: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್

Update: 2021-02-04 16:40 GMT

ಬೆಂಗಳೂರು, ಫೆ. 4: ‘ಗಂಗಾನದಿಯ ದುಸ್ಥಿತಿ ರಾಜ್ಯದಲ್ಲಿ ಹರಿಯುವ ಕಾವೇರಿ ನದಿಗೆ ಬರದಿರಲಿ. ಕಾವೇರಿ ಮಲಿನ ಆಗುವುದನ್ನು ತಪ್ಪಿಸಲು ನದಿ ಪಾತ್ರದಲ್ಲಿನ ನಗರಗಳ ಮಲಿನ ನೀರನ್ನು ಸ್ವಚ್ಛಗೊಳಿಸಿ ನದಿಗೆ ಬಿಡಲು ಸರಕಾರ ಕ್ರಮ ಕೈಗೊಳ್ಳಬೇಕು' ಎಂದು ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಾವೇರಿ ನದಿ ಪಾತ್ರದಲ್ಲಿನ ನಗರಗಳ ಕೊಳಚೆ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಇದರಿಂದ ನೀರು ಮಲಿನವಾಗುತ್ತಿದ್ದು, ಜನ-ಜಾನುವಾರುಗಳಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ಗಮನ ಸೆಳೆದರು.

ಇದಕ್ಕೆ ಉತ್ತರ ನೀಡಿದ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್, ‘ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಸಂದರ್ಭದಲ್ಲಿ ಕಲುಷಿತ ನೀರು ಮಿಶ್ರಣವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಕಾವೇರಿ ನದಿ ನೀರನ್ನು ಕರ್ನಾಟಕ ನಗರ ನೀರು, ಸರಬರಾಜು ಮತ್ತು ಒಳಚರಂಡಿ ಮೂಲಕ ಪೂರೈಕೆ ಮಾಡಲಾಗುತ್ತದೆ.

ಕಾವೇರಿ ನದಿ ಪಾತ್ರದಲ್ಲಿ ಶ್ರೀರಂಗಪಟ್ಟಣ, ಟಿ.ನರಸೀಪುರ, ಹನೂರು, ಬನ್ನೂರು ನಗರಗಳಲ್ಲಿ ನೀರು ಸಂಸ್ಕರಣೆಯಾಗದೆ ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಎರಡು ನಗರದಲ್ಲಿ ಎಸ್ಟಿಪಿ ಘಟಕಗಳನ್ನು ಅಳವಡಿಸಿದ್ದು, ಉಳಿದೆರಡು ನಗರಗಳಲ್ಲಿ ಎಸ್ಟಿಪಿ ಆಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದರು.

ಶ್ರೀರಂಗಪಟ್ಟಣ, ಬನ್ನೂರು ಸೇರಿದಂತೆ ಮತ್ತಿತರ ನಗರಗಳಿಗೆ ಮಲಿನ ನೀರು ಸಂಸ್ಕರಣೆಯಾಗದೆ ನೇರವಾಗಿ ನದಿಗೆ ಸೇರದಂತೆ ತಡೆಯಲು ಯೋಜನೆಯನ್ನು ರೂಪಿಸುವ ಪ್ರಸ್ತಾವನೆ ಸರಕಾರಕ್ಕೆ ಬಂದಿದೆ. ಇದಕ್ಕಾಗಿ 208 ಕೋಟಿ ರೂ.ಹಣವನ್ನು ಮೀಸಲಿಡಲಾಗಿದೆ. ಶುದ್ದೀಕರಣ ಘಟಕಗಳನ್ನು ತೆರೆಯಲು ಸರಕಾರ ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿ ತಿಂಗಳು ನೀರಿನ ಪರೀಕ್ಷೆ: ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾವೇರಿ ನದಿನೀರು ಪೂರೈಕೆ ಮಾಡಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ನದಿ ನೀರು ಮಾಪನ ಕಾರ್ಯಕ್ರಮದಡಿ ಕಾವೇರಿ ನದಿ ನೀರನ್ನು 22 ಕೇಂದ್ರಗಳಲ್ಲಿ ಸಂಗ್ರಹಿಸಿ, ವಿಶ್ಲೇಷಿಸಿ ನಂತರ ಅದರ ವರದಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾಗುತ್ತದೆ. ಕಲುಷಿತ ನೀರು ತಡೆಯಲು ಸರಕಾರ ಕ್ರಮವಹಿಸಿದೆ ಎಂದು ತಿಳಿಸಿದರು.

ಅರಣ್ಯ ಸಚಿವರು ಹೌದೋ ಇಲ್ಲವೋ..:

‘ಸಿ.ಪಿ.ಯೋಗೇಶ್ವರ್ ಅವರು ಅರಣ್ಯ ಸಚಿವರು ಹೌದೋ ಇಲ್ಲವೋ ಮೊದಲು ಸ್ಪಷ್ಟಪಡಿಸಬೇಕು. ನನಗೆ ಅವರು ನೀಡಿರುವ ಉತ್ತರದ ಪ್ರತಿಯಲ್ಲಿ ಅವರ ಸಹಿಯೇ ಇಲ್ಲ. ಹೀಗಾಗಿ ಅವರ ಖಾತೆ ಏನಾದರೂ ಬದಲಾವಣೆ ಮಾಡಲಾಗಿದೆಯೋ ಹೇಗೇ?'

-ಅಪ್ಪಚ್ಚು ರಂಜನ್, ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News